ರಾಯಚೂರು: ಕಾರ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್‌ನಲ್ಲಿದ್ದ ತಾಯಿ ಮತ್ತು ಮಗ ಸ್ಥಳದಲ್ಲೇ ಮೃತಪಟ್ಟರೆ, ಅಳಿಯ ಮತ್ತು ಮಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಳೆದ ರಾತ್ರಿ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಹತ್ತಿರ ಸಂಭವಿಸಿದೆ. ಭಾರತಿ(29), ಉದಯಶಂಕರ(11) ಮೃತರು. ಇವರು ಮಸ್ಕಿ ತಾಲೂಕಿನ ಯರದೊಡ್ಡಿ ಗ್ರಾಮದ ನಿವಾಸಿಗಳು. ಮಗಳು ಪೂಜಾ ಹಾಗೂ ಅಳಿಯ ಪರಮೇಶ ಎಂಬವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.
ಭಾರತಿ ಅವರ ಮಕ್ಕಳು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಿಯಮ್ಮನ್ನ ಹಳ್ಳಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಹೀಗಾಗಿ ಬೈಕ್‌ನಲ್ಲಿ ಶಾಲೆಗೆ ಬಿಡಲು ತೆರಳುತ್ತಿದ್ದರು. ಈ ನಡುವೆ ಇಲಕಲ್ ಕಡೆಯಿಂದ ಬರುತ್ತಿದ್ದ ಕಾರು ಇವರಿದ್ದ ಬೈಕ್ಗೆ ಡಿಕ್ಕಿ ಹೊಡೆದಿದೆ ಎನ್ನಲಾಗುತ್ತಿದೆ.
ಗಾಯಾಳುಗಳನ್ನು ಬಾಗಲಕೋಟೆಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಘಟನಾ ಸ್ಥಳಕ್ಕೆ ಮುದಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಳಿಯ ಪರಮೇಶ ಅವರ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಗೆ ಕಾರಣವಾದ ಕಾರು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಕಾರ್ ಮಾಲೀಕರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಹಂಪೆಯಲ್ಲಿ ಬಾಲಕ ನೀರುಪಾಲು: ವಿಜಯನಗರದಲ್ಲಿ ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಪುಣ್ಯಸ್ನಾನಕ್ಕಾಗಿ ಹಂಪೆಗೆ ಬಂದಿದ್ದ ಬಾಲಕನೋರ್ವ ನೀರು ಪಾಲಾದ ಘಟನೆ ನಡೆದಿದೆ. ಹಂಪೆಯ ತುಂಗಭದ್ರಾ ನದಿಯಲ್ಲಿ ಮುಳುಗಿ ವಿನಯ್(17)ಎನ್ನುವ ಬಾಲಕ ಮೃತಪಟ್ಟಿದ್ದಾನೆ. ವಿನಯ್ ದ್ವಿತೀಯ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ವಿನಯ್ ಹುಬ್ಬಳ್ಳಿಯ ಗಂಟಿಕೇರಿ ನಿವಾಸಿಯಾಗಿದ್ದು, ಕುಟುಂಬ ಸಮೇತ ಹಂಪಿ ವೀಕ್ಷಣೆಗೆ ಆಗಮಿಸಿದ್ದಾಗ ಘಟನೆ ನಡೆದಿದೆ. ಹಂಪೆಯ ಪ್ರವಾಸಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಇದನ್ನೂ ಓದಿ: ಗಾಳಿಪಟದ ಚೀನಾ ದಾರದಿಂದ ಅವಘಡ: ಬೈಕ್ ಸವಾರ ಸಾವು, ಮಗು ಬಾಯಿಗೆ 120 ಹೊಲಿಗೆ!