ರಾಯಚೂರು: ಅಪೌಷ್ಟಿಕತೆ ಇರೋ ಮಕ್ಕಳನ್ನು ಹೆಚ್ಚು ಹೊಂದಿರುವ ಜಿಲ್ಲೆ ಎಂದೇ ಗುರುತಿಸಿಕೊಂಡಿದೆ ರಾಯಚೂರು. ಇಂತಹ ಸಂದರ್ಭದಲ್ಲಿ ಲಿಂಗಸುಗೂರು ಬೈಪಾಸ್ ರಸ್ತೆಯ ಸಂದಿಯೊಂದರಲ್ಲಿ ಅನಾಥ ಮಗುವೊಂದನ್ನು ಬಿಟ್ಟು ಹೋಗಿರುವ ಘಟನೆ ನಡೆದಿದೆ.
ಸೋಮವಾರ ಬೈಪಾಸ್ ರಸ್ತೆಯ ಮೊಬೈಲ್ ಅಂಗಡಿ ಪಕ್ಕದ ಸಂದಿಯಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಗಂಡು ಮಗುವೊಂದು ಸಿಕ್ಕಿದೆ. ಮಾಹಿತಿ ತಿಳಿದ ಪೊಲೀಸ್ ಸಿಬ್ಬಂದಿ ಬಸಯ್ಯ, ನಾಗರಾಜ, ಮಂಜು ಸ್ಥಳಕ್ಕೆ ಧಾವಿಸಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಆಸ್ಪತ್ರೆಗೆ ದಾಖಲಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಸಿಪಿಐ ಯಸವಂತ ಬಿಸನಳ್ಳಿ, ಪಿಎಸ್ಐ ಪ್ರಕಾಶ ಡಂಬಳ ಮಾರ್ಗದರ್ಶನದಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಮಗುವನ್ನು ದಾಖಲಿಸಿದ ಪೊಲೀಸ್ ಸಿಬ್ಬಂದಿ, ಅಗತ್ಯ ಚಿಕಿತ್ಸೆ ಕೊಡಿಸುತ್ತಿರುವುದು ಕಂಡ ಯುವಕರು ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ತಾವೂ ಸಹಾಯಕ್ಕೆ ಮುಂದಾದರು. ಸಿಡಿಪಿಒ ಲಿಂಗನಗೌಡ್ರನ್ನು ಸಂಪರ್ಕಿಸಿದಾಗ ಪೊಲೀಸ್ ಸಿಬ್ಬಂದಿ ಅನಾಥ ಮಗುವೊಂದನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ ಮಾಹಿತಿ ಗೊತ್ತಾಗಿದೆ. ಕೂಡಲೇ ಮಗುವನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಹಸ್ತಾಂತರಿಸಿ ಮಗು ಯಾರದ್ದು ಎಂಬುದನ್ನು ಪತ್ತೆ ಹಚ್ಚಲಾಗುವುದು. ಅನಾಥವಾಗಿದ್ದರೆ ಅನಾಥಾಶ್ರಮಕ್ಕೆ ಸೇರಿಸಲಾಗುವುದು ಎಂದರು.