ರಾಯಚೂರು: ಕರುನಾಡು ಅನೇಕ ಧಾರ್ಮಿಕ ಕ್ಷೇತ್ರಗಳನ್ನು ಒಳಗೊಂಡಿವೆ. ಅದರಲ್ಲಿ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಗುರುಗುಂಟಾ ಶ್ರೀ ಅಮರೇಶ್ವರ ದೇವಾಲಯವೂ ಒಂದು.
ಕಲಿಯುಗದಲ್ಲಿ ಅವತಾರ ಎತ್ತಿರುವ ಶ್ರೀ ಅಮೇಶ್ವರ ಸ್ವಾಮಿಯ ದೇವಾಲಯ ಧಾರ್ಮಿಕ ಕ್ಷೇತ್ರದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದೆ. ಇಂತಹ ಕ್ಷೇತ್ರದಲ್ಲಿ ವರ್ಷದ 365 ದಿನ ಸದಾ ಕಾಲ ನೀರು ಉದ್ಭವವಾಗುತ್ತಿದ್ದು, ಅಮರೇಶ್ವರ ಸ್ವಾಮಿ ಕಲಿಯುಗದಲ್ಲಿ ಅವತಾರ ಎತ್ತಿದ್ದಾನೆ ಎಂದು ಹೇಳಲಾಗುತ್ತದೆ.
ಆದ್ರೆ ಈ ಕ್ಷೇತ್ರದಲ್ಲಿ ಅದಕ್ಕಿಂತ ಮುಂಚೆ ತ್ರೇತಾಯುಗದಲ್ಲಿ ಆಗಸ್ತ್ಯ ಮಹಾಋಷಿ 12 ವರ್ಷಗಳ ಕಾಲ ತಪಸ್ಸು ಮಾಡಿ ಯಜ್ಞ ಮಾಡಿದ್ದಾರೆ ಎಂದು ಹೇಳಲಾಗುತ್ತದೆ. ಯಜ್ಞ ಮುಗಿಸಿಕೊಂಡು ವಾಪಸ್ ತೆರಳಿದ ಮೇಲೆ ತ್ರೇತಾಯುಗದಲ್ಲಿ ಉದ್ಭವಾಗಿರುವ ಕುಂಭೋದ್ಭವದಿಂದ ಇಂದಿಗೂ ಗಂಗೆ ಹರಿಯುತ್ತಿದೆ. ನೀರು ನೋಡಿದರೆ ಕನ್ನಡಿ ನೋಡಿದಂತೆ ಆಗುತ್ತಿದ್ದು, ಎಷ್ಟು ಶತಮಾನಗಳು ಕಳೆದರೂ ಒಂದು ದಿನ ಸಹ ನೀರು ಬತ್ತಿ ಹೋಗಿರುವ ಉದಾಹರಣೆಯಿಲ್ಲ ಎನ್ನಲಾಗುತ್ತೆ.
ಕಲ್ಲು ಬಂಡೆಯಿಂದ ಬರುತ್ತಿರುವ ಈ ನೀರು ಧಾರ್ಮಿಕ ಇತಿಹಾಸವನ್ನ ಹೊಂದಿದೆ. ಹಿಮಾಮಲದಲ್ಲಿ ತಪಸ್ಸು ಮಾಡುತ್ತಿದ್ದ ವೇಳೆ ಅಗಸ್ತ್ಯ ಮಹಾಋಷಿಗಳ ಮನಸ್ಸಿಗೆ ಸಮಾಧಾನವಾಗಿಲ್ಲ. ಆಗ ಹಿಮಾಲಯದ ಋಷಿ-ಮುನಿಗಳನ್ನ ವಿಚಾರಿಸಿದಾಗ ರೇವಣ್ಣ ಸಿದ್ದೇಶ್ವರ ಸ್ವಾಮಿ ಭೇಟಿಯಾಗು ಎನ್ನುವಂತ ಸಲಹೆ ನೀಡಿದರಂತೆ. ಆಗ ಅಗಸ್ತ್ಯ ಮಹಾಋಷಿಗೆ ಕುಂಭೋದ್ಭವ ಯಜ್ಞ ಮಾಡು ಎಂದು ಹೇಳಿ ಅಮರೇಶ್ವರ ಜಾಗವನ್ನ ತೋರಿಸಿದ್ದಾರೆ. ಆಗ 12 ವರ್ಷಗಳ ವಿಶೇಷ ಯಜ್ಞ ಮಾಡಿದ ಮನಸ್ಸು ಗಟ್ಟಿಯಾಗಿದೆ. ಬಳಿಕ ಅಲ್ಲಿಂದ ಮಹಾಋಷಿಗಳು ತೆರಳಿದ್ದಾರೆ. ಅವರು ಯಜ್ಞ ಮಾಡಿದ ಸ್ಥಳದಲ್ಲೇ ಮುಖದ ಬಿಂಬ ಕಾಣುವಂತಹ ಕುಂಭೋದ್ಭವವಾಗಿದೆ.
ಯಜ್ಞದ ವೇಳೆ ಅಂದು ಎಷ್ಟು ಪ್ರಮಾಣದಲ್ಲಿ ನೀರು ಇದೆಯೋ ಅಷ್ಟೇ ಪ್ರಮಾಣದಲ್ಲಿ ನಿಲುಗಡೆಯಾಗಿ, ಮಳೆಗಾಲದಲ್ಲಿ ಹೆಚ್ಚಾಗಿ ನೀರು ಹರಿಯುತ್ತದೆ. ಈ ನೀರಿನಲ್ಲಿ ಸ್ನಾನ ಮಾಡಿದರೆ ಕೆಲ ಚರ್ಮರೋಗಗಳಿಂದ ಮುಕ್ತಿ ಸಿಗುತ್ತೆ ಎನ್ನುವ ನಂಬಿಕೆ ಇದೆ. ಒಂದು ಕಡೆ ಈ ನೀರನ್ನ ಪೂಜೆ-ಪುನಸ್ಕಾರಕ್ಕೆ ಬಳಸಿದರೆ ಒಳಿತಾಗಲಿದೆ ಎನ್ನುವ ನಂಬಿಕೆ ಇದೆ.
ಈಗಾಗಲೇ ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿ ಹಳ್ಳ-ಕೊಳ್ಳಗಳು, ಬೋರ್ವೆಲ್ಗಳು, ಬಾವಿಗಳು, ಇತಿಹಾಸ ಪ್ರಸಿದ್ಧ ಕೆರೆಗಳು ಸಹ ನೀರಿಲ್ಲದೆ ಬತ್ತಿ ಹೋಗಿದ್ದು, 300ರಿಂದ 500 ಅಡಿ ಆಳ ಬೋರ್ವೆಲ್ ಕೊರೆಸಿದ್ರು ನೀರು ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ಅಮರೇಶ್ವರ ದೇವಾಲಯದಲ್ಲಿನ ಗಡಿಗಿ ಬಾವಿಯಲ್ಲಿ ವರ್ಷ ಪೂರ್ತಿ ನೀರು ಇರುವುದು ವಿಶೇಷವೇ ಸರಿ.