ಮೈಸೂರು: ನಿಶ್ಚಿತಾರ್ಥದ ಮನೆಯಲ್ಲಿ ಕಳ್ಳತನ ಮಾಡಿದ್ದ ಯುವತಿಯನ್ನು ಮೇಟಗಳ್ಳಿ ಪೊಲೀಸರು ಬಂಧಿಸಿ, ಆಕೆಯಿಂದ 4,15,000 ರೂ. ಬೆಲೆಬಾಳುವ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಆಶ್ರಿತ ಬಂಧಿತ ಯುವತಿ. ನಗರದ ಕುಂಬಾರಕೊಪ್ಪಲಿನ ಸುಭಾಷ್ ನಗರದ ನಿವಾಸಿ ರಮೇಶ್ ಎಂಬವರ ಮನೆಯಲ್ಲಿ ಆಗಸ್ಟ್ 23 ರಂದು ಮಗಳ ನಿಶ್ಚಿತಾರ್ಥ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ರಮೇಶ್ ಪುತ್ರಿ ಚಿನ್ನಾಭರಣಗಳನ್ನು ಧರಿಸಿ ಕಾರ್ಯಕ್ರಮ ಮುಗಿದ ನಂತರ ಅವುಗಳನ್ನು ಮನೆಯೊಳಗೆ ಬಿಚ್ಚಿ ಇಟ್ಟಿದ್ದರು. ನಂತರ ಒಡವೆಗಳು ಕಾಣೆಯಾಗಿದ್ದು, ರಮೇಶ್ ಮೇಟಗಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಮೇಟಗಳ್ಳಿ ಪೊಲೀಸರು ನಿಶ್ಚಿತಾರ್ಥ ದಿನದಂದು ಮನೆಗೆ ಆಗಮಿಸಿದ ಮಗಳ ಪರಿಚಿತಳಾದ ಆಶ್ರಿತ (21) ವಿಚಾರಣೆಗೆ ಒಳಪಡಿಸಿದಾಗ ಒಡವೆಗಳನ್ನು ಕಳ್ಳತನ ಮಾಡಿವುದಾಗಿ ಒಪ್ಪಿಕೊಂಡಿದ್ದಾಳೆ. ಆಕೆಯಿಂದ 85 ಗ್ರಾಂ ತೂಕದ ಎರಡು ಸರ, ಒಂದು ಜೊತೆ ಓಲೆಯನ್ನು ವಶಪಡಿಸಿಕೊಂಡಿದ್ದು , ಯುವತಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.