ಮೈಸೂರು: ಶರನ್ನವರಾತ್ರಿಯ ಸಂದರ್ಭದಲ್ಲಿ ಹಿಂದಿನ ರಾಜ ಮನೆತನಗಳು ಹೇಗೆ ಆಚರಿಸುತ್ತಿದ್ದರೋ ಅದೇ ರೀತಿ ಆಚರಣೆಗಳು ಇಂದಿಗೂ ಮುಂದುವರೆದುಕೊಂಡು ಬರುತ್ತಿದ್ದು, ಅರಮನೆಯಲ್ಲಿ ಖಾಸಗಿ ದರ್ಬಾರ್ ನಡೆಸುವುದು ನಮ್ಮ ಕರ್ತವ್ಯ. 9 ದಿನಗಳು ಕೂಡ ಸಿಂಹಾಸನ ಪೂಜೆ ಹಾಗೂ ದರ್ಬಾರ್ ನಡೆಯುತ್ತದೆ ಎಂದು ಈಟಿವಿ ಭಾರತ್ ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.
ಅಂಬಾರಿಯ ವೈಶಿಷ್ಟ್ಯತೆ, ಧಾರ್ಮಿಕ ಪದ್ಧತಿಗಳು ಮುಂತಾದ ವಿಷಯಗಳ ಬಗ್ಗೆ ಈಟಿವಿ ಭಾರತ್ಗೆ ವಿವರಿಸಿದ್ದಾರೆ. ದಸರಾ ಪರಂಪರೆ ಪುರಾತನವಾಗಿದ್ದು ಮತ್ತು ಇದರ ಬಗ್ಗೆ ಪುರಾಣದಲ್ಲಿ ಉಲ್ಲೇಖವಿದೆ. ರಾಜ ಮನೆತನಗಳು ದಸರಾವನ್ನು ಆಚರಿಸುತ್ತಾ ಬಂದಿದ್ದಾರೆ. ಕರ್ನಾಟಕದಲ್ಲಿ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ವಿಜಯದಶಮಿ ಆಚರಣೆ ಮಾಡುತ್ತಿದ್ದರು. ಆನಂತರ 1610 ರಲ್ಲಿ ಮೈಸೂರಿನ ಸಂಸ್ಥಾನದ ರಾಜ ಒಡೆಯರ್ ಶ್ರೀರಂಗಪಟ್ಟಣದಲ್ಲಿ ಈ ಪರಂಪರೆಯನ್ನು ಮುಂದುವರೆಸಿಕೊಂಡು ದಸರಾ ಆಚರಿಸಿಕೊಂಡು ಬಂದರು.
ಅದೇ ಪರಂಪರೆಯನ್ನು ನವರಾತ್ರಿ ಹಾಗೂ ವಿಜಯದಶಮಿ ಸಂದರ್ಭದಲ್ಲಿ ನಾವು ಚಾಚು ತಪ್ಪದೇ ಹಿಂದಿನ ಧಾರ್ಮಿಕ ವಿಧಿ- ವಿಧಾನಗಳನ್ನು ರಾಜ ಮಾತೆಯ ಸಲಹೆ ಮತ್ತು ಆಶೀರ್ವಾದದಿಂದ ಮುಂದುವರೆಸಿಕೊಂಡು ಬರುತ್ತಿದ್ದೇವೆ ಎಂದು ದಸರಾ ಇತಿಹಾಸದ ಬಗ್ಗೆ ರಾಜ ವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿವರಿಸುತ್ತಾರೆ.
ಖಾಸಗಿ ದರ್ಬಾರ್ ನಡೆಸುವುದು ನಮ್ಮ ಕರ್ತವ್ಯ: ಹಿಂದೆ ರಾಜ ಮನೆತನದವರು ಶರನ್ನವರಾತ್ರಿ ಹಾಗೂ ವಿಜಯದಶಮಿಯನ್ನು ಆಚರಿಸುತ್ತಿದ್ದರು. ಅದೇ ಕಾರ್ಯವನ್ನು ನಾವು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ದಕ್ಷಿಣ ಭಾರತದಲ್ಲಿ ಈ ದಸರೆಗೆ 400 ವರ್ಷಗಳ ಕಾಲದಿಂದಲೂ ರಾಜ ಮನೆತನದಲ್ಲಿ ಅರ್ಥ ಪೂರ್ಣವಾಗಿ ಶರನ್ನವರಾತ್ರಿಯ ಪರಂಪರೆಯನ್ನು ನಡೆಸಿಕೊಂಡು ಬರುತ್ತಿದ್ದರು. ಅದೇ ಪರಂಪರೆಯನ್ನು ನಾವು ಸಹಾ ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಅದರಲ್ಲಿ ಖಾಸಗಿ ದರ್ಬಾರ್ ಒಂದು. ಅದನ್ನು ಮುಂದುವರೆಸಿಕೊಂಡು ಹೋಗುವುದು ನಮ್ಮ ಕರ್ತವ್ಯ ಎಂದರು.
ಚಿನ್ನದ ಅಂಬಾರಿ ಬಗ್ಗೆ ಹೇಳಿದ್ದೇನು?: ಜಂಬೂಸವಾರಿಯ ದಿನ ಚಿನ್ನದ ಅಂಬಾರಿ ಹೊತ್ತ ಆನೆ ನಾಡ ಅಧಿದೇವತೆ ಚಾಮುಂಡಿ ತಾಯಿಯ ಉತ್ಸವ ಮೂರ್ತಿಯನ್ನು ಹೊತ್ತು ಈಗ ಬನ್ನಿ ಮಂಟಪದವರೆಗೆ ಹೋಗುತ್ತದೆ. ಆದರೆ ಈ ಚಿನ್ನದ ಅಂಬಾರಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ನಿರ್ಮಾಣವಾಗಿತ್ತು.
ಈ ಅಂಬಾರಿಯನ್ನು ಹಿಂದೆ ಅಂಬಾರಿಯ ಜಂಬೂಸವಾರಿಯಲ್ಲಿ ರಾಜರು ಕುಳಿತು ಹೋಗುತ್ತಿದ್ದರು. ಮತ್ತು ಮದುವೆ ಹಾಗೂ ವಿಶೇಷ ದಿನಗಳಲ್ಲಿ ಈ ಚಿನ್ನದ ಅಂಬಾರಿಯನ್ನು ಮಹಾರಾಜರು ಹಾಗೂ ಕುಟುಂಬದವರು ಬಳಸುತ್ತಿದ್ದರು. ಆದರೆ, ಕಾಲಾನಂತರ ಕುಲದೇವಿಯಾದ ಚಾಮುಂಡೇಶ್ವರಿಯ ಮೆರವಣಿಗೆಗೆ ಮಾತ್ರ ಈ ಅಂಬಾರಿಯನ್ನು ಬಳಸುತ್ತಿದ್ದು, ಅದೇ ರೀತಿ ಈಗ ವಿಜಯದಶಮಿ ದಿನ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನು ಇಟ್ಟು ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸುವುದು ಈಗ ನಡೆದುಕೊಂಡು ಬಂದಿದ್ದು ಅದೇ ಜಂಬೂಸವಾರಿಯಾಗಿದೆ.
ಶರನ್ನವರಾತ್ರಿಯ ಧಾರ್ಮಿಕ ವಿಧಿ ವಿಧಾನಗಳು ಚಾಮುಂಡಿ ಬೆಟ್ಟದಲ್ಲಿ ನಡೆಯುವ ಹಾಗೆ ದೇಶದ ಬೇರೆ ಬೇರೆ ಭಾಗಗಳಲ್ಲಿಯೂ ನಡೆಯುತ್ತದೆ. ಆದರೆ, ಚಾಮುಂಡಿ ಬೆಟ್ಟದಲ್ಲಿ ನವರಾತ್ರಿಗೆ ನಡೆಯುವ ಪೂಜಾ ಕಾರ್ಯಗಳು ಅದೇ ರೀತಿ ಅರಮನೆಯಲ್ಲಿ ಸಹಾ ನಡೆಯುತ್ತಿದ್ದು, ಎರಡಕ್ಕೂ ಸಾಮ್ಯವಿದೆ ಎನ್ನುತ್ತಾರೆ.
ನಾಡಿನ ಜನತೆಗೆ ಶರನ್ನವರಾತ್ರಿ ಶುಭಾಶಯ: ಶರನ್ನವರಾತ್ರಿ ವೈಶಿಷ್ಟ್ಯ ಇರುವುದು ಈ ವರ್ಷ ಆಗಿರುವ ಒಳ್ಳೆಯ ಕೆಲಸಕ್ಕೆ ವಂದನೆ ಅರ್ಪಿಸಿ ಮುಂದೆ ಬರುವ ವರ್ಷಕ್ಕೆ ಎಲ್ಲರಿಗೂ ಒಳಿತಾಗಲಿ, ಜನರು ಕೈಗೊಳ್ಳುವ ಫಲಿಸಲಿ ಎಂಬ ಉದ್ದೇಶದಿಂದ. ಒಟ್ಟಾರೆ ನಮ್ಮ ನಾಡು , ನಮ್ಮ ದೇಶಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುವುದಾಗಿದೆ.
ಎಲ್ಲರ ಮೇಲೂ ನಾಡ ಅಧಿದೇವತೆ ಚಾಮುಂಡೇಶ್ವರಿಯ ಆಶೀರ್ವಾದ ಇರಲಿ ಎಂದು ಪ್ರಾರ್ಥಿಸುತ್ತೇವೆ ಎಂದು ನವರಾತ್ರಿಯ ಸಂದರ್ಭದಲ್ಲಿ ಈಟಿವಿ ಭಾರತ್ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಒಡೆಯರ್ ಮಾಹಿತಿ ನೀಡಿದರು.