ಮೈಸೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಇತ್ತೀಚೆಗೆ ಹಠಾತ್ ನಿಧನರಾದ ಹಿನ್ನೆಲೆಯಲ್ಲಿ, ಧ್ರುವನಾರಾಯಣ್ ಅವರ ನಿವಾಸಕ್ಕೆ ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಹಾಗೂ ಅವರ ಪುತ್ರ ಸುನಿಲ್ ಬೋಸ್ ಭೇಟಿ ನೀಡಿದರು. ಮೈಸೂರಿನ ವಿಜಯನಗರದಲ್ಲಿರುವ ಆರ್ ಧ್ರುವನಾರಾಯಣರ ನಿವಾಸಕ್ಕೆ ಭೇಟಿ ನೀಡಿದ ಡಾ.ಎಚ್.ಸಿ.ಮಹದೇವಪ್ಪ, ಧ್ರುವನಾರಾಯಣ್ ಅವರ ಪುತ್ರ ದರ್ಶನ್ಗೆ ಸಾಂತ್ವನ ಹೇಳಿ ಆತ್ಮಸ್ತೈರ್ಯ ತುಂಬಿದರು. ನೀನು ಬೇರೆಯಲ್ಲ ನನ್ನ ಮಗ ಬೇರೆಯಲ್ಲ. ನೀವಿಬ್ಬರೂ ನನಗೆ ಒಂದೇ. ನಿಮ್ಮ ಕುಟುಂಬಕ್ಕೆ ಅಗತ್ಯವಾದ ಎಲ್ಲಾ ರೀತಿಯ ನೆರವು ನೀಡುತ್ತೇನೆಂದು ಅಭಯ ನೀಡಿದರು.
ಈ ವೇಳೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಹದೇವಪ್ಪ, ಆರ್ ಧ್ರುವನಾರಾಯಣ ಪುತ್ರ ದರ್ಶನ್ಗೋಸ್ಕರ ನಂಜನಗೂಡು ಕ್ಷೇತ್ರದ ಟಿಕೆಟ್ ತ್ಯಾಗ ಮಾಡುವುದಾಗಿ ಘೋಷಿಸಿದರು. ನಾನು ನಂಜನಗೂಡು ಕ್ಷೇತ್ರದ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿದ್ದೇನೆ. ಧ್ರುವನಾರಾಯಣ್ ಅವರ ಪುತ್ರ ದರ್ಶನ್ಗೆ ನಾನು ಬೆಂಬಲ ನೀಡುತ್ತೇನೆ. ದರ್ಶನ್ ಅವರನ್ನು ಗೆಲ್ಲಿಸಲು ಮುಂದಾಗುತ್ತೇನೆ ಎಂದರು.
ನಂಜನಗೂಡಿನಲ್ಲಿ ಧ್ರುವ ಪುತ್ರನಿಗೆ ಟಿಕೆಟ್ ನೀಡಿ: ನಂಜನಗೂಡು ಮೀಸಲು ಕ್ಷೇತ್ರದಲ್ಲಿ ದಿವಂಗತ ಆರ್ ಧ್ರುವನಾರಾಯಣ್ ಅವರ ಪುತ್ರನಿಗೆ ಟಿಕೆಟ್ ನೀಡಬೇಕು. ಟಿಕೆಟ್ ನೀಡದೇ ಹೋದರೆ ಚುನಾವಣೆಯಲ್ಲಿ ನಾವೇ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸುತ್ತೇವೆ ಎಂದು ಪಕ್ಷದ ಕಾರ್ಯಕರ್ತರು ಎಚ್ಚರಿಕೆ ರವಾನಿಸಿದ್ದಾರೆ.
ಮಂಗಳವಾರದಂದು ನಂಜನಗೂಡು ನಗರದ ನಂದಿ ಭವನದಲ್ಲಿ ಧ್ರುವನಾರಾಯಣ್ ಬೆಂಬಲಿಗರು ಹಾಗೂ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಅವರ ನೇತೃತ್ವದಲ್ಲಿ ನಡೆದ ಆರ್ ಧ್ರುವನಾರಾಯಣ್ ಶ್ರದ್ಧಾಂಜಲಿ ಪೂರ್ವಭಾವಿ ಸಭೆಯಲ್ಲಿ, ದರ್ಶನ್ ಧ್ರುವನಾರಾಯಣ್ ಅವರಿಗೆ ಟಿಕೆಟ್ ನೀಡುವಂತೆ ಒಕ್ಕೋರಲಿನ ಆಗ್ರಹ ಕೇಳಿಬಂದಿದೆ.
ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ, ಆರ್ ಧ್ರುವನಾರಾಯಣ್ ಅವರನ್ನು ಕಳೆದುಕೊಂಡು ತುಂಬಾಲಾರದ ನಷ್ಟವಾಗಿದೆ. ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ಸಭೆ ನಡೆಸುತ್ತಿದ್ದೇವೆ. ಮಾ.18 ರಂದು ಶ್ರದ್ಧಾಂಜಲಿ ಕಾರ್ಯಕ್ರಮ ಆಯೋಜಿಸಲು ನಿರ್ಧಾರ ಮಾಡಲಾಗಿದೆ. ಸದ್ಯ ಕಾರ್ಯಕ್ರಮದ ರೂಪುರೇಷೆ, ಕಾರ್ಯಕ್ರಮದ ಸ್ಥಳ ನಿಗದಿಗಾಗಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಮೈಸೂರು ಜಿಲ್ಲೆ ಮತ್ತು ಚಾಮರಾಜನಗರ ಜಿಲ್ಲೆಯ ಧ್ರುವನಾರಾಯಣ್ ಬೆಂಬಲಿಗರು ಹಾಗೂ ಪ್ರಮುಖ ಮುಖಂಡರು ಭಾಗಿಯಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕರ್ತರ ಒತ್ತಾಯ: ನಂಜನಗೂಡಿನಲ್ಲಿ ದರ್ಶನ್ಗೆ ಟಿಕೆಟ್ ಕೊಡುವಂತೆ ಕೈ ಕಾರ್ಯಕರ್ತರು ಒತ್ತಾಯಿಸಿದ್ದಾರೆ. ದರ್ಶನ್ ಅವರಿಗೆ ಟಿಕೆಟ್ ನೀಡಬೇಕು. ಗೊಂದಲ ಇದ್ದರೆ ಇಲ್ಲೇ ಬಿಟ್ಟು ಹೋಗಿ ಎಂದು ನಂಜನಗೂಡು ಯೂತ್ ಕಾಂಗ್ರೆಸ್ ಮುಖಂಡ ದೇಬೂರು ಅಶೋಕ್ ಹೇಳಿದ್ದಾರೆ.
ನಂಜನಗೂಡು ಕ್ಷೇತ್ರದಲ್ಲಿ ಶಾಸಕರಾಗಬೇಕು ಎಂಬುದು ಧ್ರುವನಾರಾಯಣ್ ಕನಸಾಗಿತ್ತು. ಇದೀಗ ಅವರ ಪುತ್ರನ ಮನಸ್ಸಿನಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ಅವರು ಒಪ್ಪಿದರೆ ಅವರ ಪರ ಕೆಲಸ ಮಾಡೋಣ. ನಾವು ನಮ್ಮ ಚೌಕಟ್ಟಿನಲ್ಲೇ ಕೇಳೋಣ. ಯಾರನ್ನು ಟೀಕೆ ಮಾಡುವುದು ಬೇಡ ಎಂದು ಚಾಮರಾಜನಗರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ಕೆ. ರವಿ ಕುಮಾರ್ ಮನವಿ ಮಾಡಿದರು.
ಇದನ್ನೂ ಓದಿ: ಉರಿಗೌಡ, ನಂಜೇಗೌಡ ವಿಚಾರ: ಸತ್ಯ ಮರೆಮಾಚಲು ಸಾಧ್ಯವಿಲ್ಲ ಎಂದ ಮುನಿರತ್ನ