ಮೈಸೂರು: ಚೀನಾದಿಂದ ನಂಜನಗೂಡಿನ ಜ್ಯುಬಿಲೆಂಟ್ ಕಾರ್ಖಾನೆಗೆ ಬಂದ ಕಂಟೈನರ್ನಲ್ಲಿದ್ದ ವಸ್ತುಗಳ ಮಾದರಿಯನ್ನು ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದ್ದಾರೆ.
ಜ್ಯುಬಿಲೆಂಟ್ ನೌಕರರಿಗೆ ಕೊರೊನಾ ಸೋಂಕು ಹರಡಿದ್ದು, ಇದರಿಂದ ಜಿಲ್ಲೆಯ ಜನರು ಭಯಭೀತರಾಗಿದ್ದಾರೆ. ಇಲ್ಲಿಗೆ ಬಂದ ಕೊರೊನಾ ಸೋಂಕಿನ ಮೂಲ ಪತ್ತೆಯಾಗಿ, ಇಲ್ಲಿನ ಸಿಬ್ಬಂದಿಗಳ ನೆಗೆಟಿವ್ ವರದಿ ಬಂದ ನಂತರವಷ್ಟೇ ಕಾರ್ಖಾನೆಯ ಪುನರ್ ಆರಂಭಕ್ಕೆ ಅವಕಾಶ ನೀಡಬಹುದು ಎಂದು ತಿಳಿಸಿದ ಜಿಲ್ಲಾಧಿಕಾರಿ ತಿಳಿಸಿದರು.
ಮೂರನೇ ಹಂತ ತಲುಪಿಲ್ಲ:
ಮೈಸೂರಿನಲ್ಲಿ ಕೊರೊನಾ 3 ನೇ ಹಂತಕ್ಕೆ ತಲುಪಿಲ್ಲ. ಕೊರೊನಾ ಪಾಸಿಟಿವ್ ಬಂದಿರುವವರು ಈಗ ಗುಣಮುಖರಾಗುತ್ತಿದ್ದಾರೆ. ಜಿಲ್ಲೆಯಲ್ಲಿ ದೆಹಲಿಯಿಂದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಹಿಂತಿರುಗಿದವರು ಹಾಗೂ ಕಾರ್ಖಾನೆ ನೌಕರರು ಅಲ್ಲದೆ ಇವರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ ವ್ಯಕ್ತಿಗಳಿಗೆ ಮಾತ್ರ ಕೊರೊನಾ ಸೋಂಕು ತಗುಲಿದೆ. ಈ ಬಗ್ಗೆ ಈಗಾಗಲೇ ಮೈಸೂರು ಜಿಲ್ಲೆಯಲ್ಲಿ ಜ್ಯುಬಿಲೆಂಟ್ ಕಾರ್ಖಾನೆಯ ಸೋಂಕಿತರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 210 ಮಂದಿಯನ್ನು ಈಗಾಗಲೇ ಕ್ವಾರಂಟೈನ್‌ನಲ್ಲಿ ಇಡಲಾಗಿದೆ.
ಇದಲ್ಲದೆ ದೆಹಲಿಯಿಂದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಬಂದು ಸೋಂಕಿತರಾಗಿರುವ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿರುವ 17 ಜನರನ್ನೂ ಸಹ ಕ್ವಾರಂಟೈನ್‌ನಲ್ಲಿ ಇಡಲಾಗಿದ್ದು, ಇದನ್ನು ಹೊರತಾಗಿ 3ನೇ ವ್ಯಕ್ತಿಗಳಿಗೆ ಸೋಂಕು ತಗುಲಿಲ್ಲ. ಆದ್ದರಿಂದ ಜಿಲ್ಲೆಯಲ್ಲಿ ಕೊರೊನಾ 3 ನೇ ಹಂತಕ್ಕೆ ತಲುಪಿಲ್ಲ ಎಂದಿದ್ದಾರೆ.