ಮೈಸೂರು: ಜಂಬೂಸವಾರಿಗೆ ಗಜಪಡೆಯನ್ನು ಸಿದ್ಧಗೊಳಿಸುತ್ತಿರುವ ಅರಣ್ಯ ಇಲಾಖೆ, ಮೂರು ಗಂಡಾನೆಗಳಿಗೂ ಭಾರ ಹೊರುವ ತಾಲೀಮು ನಡೆಸುತ್ತಿದೆ.
ಈ ಬಾರಿ ಸರಳ ಹಾಗೂ ಸಾಂಪ್ರದಾಯಿಕ ದಸರಾ ಆಚರಿಸುವ ಹಿನ್ನೆಲೆಯಲ್ಲಿ ಕೇವಲ 5 ಆನೆಗಳನ್ನು ಮಾತ್ರ ಕರೆಸಲಾಗಿದ್ದು, ಮೊದಲ ಬಾರಿಗೆ ಜಂಬೂಸವಾರಿಯಲ್ಲಿ ಅಭಿಮನ್ಯು ಮೇಲೆ ಚಿನ್ನದ ಅಂಬಾರಿ ಹೊರಿಸಲು ತೀರ್ಮಾನಿಸಲಾಗಿದೆ.
ಆದರೂ ಆ ಸಮಯಕ್ಕೆ ಏನಾದರೂ ಘಟನೆಗಳಾದರೇ ಪರ್ಯಾಯವಾಗಿ ಅಂಬಾರಿ ಹೊರಲು ಪಟ್ಟದ ಆನೆ ವಿಕ್ರಮ ಹಾಗೂ ನಿಶಾನೆ ಆನೆ ಗೋಪಿಗೂ ದಿನಬಿಟ್ಟು ದಿನ 2 ಬಾರಿ, 500 ಕೆಜಿ ತೂಕದ ಮರಳು ಮೂಟೆಯನ್ನು ಹಾಕಿ ಅರಮನೆ ಒಳಗಡೆ ತಾಲೀಮು ನಡೆಸಲಾಗುತ್ತಿದೆ. ಕಳೆದ ಭಾನುವಾರ ವಿಕ್ರಮ ಆನೆಗೆ, ಇಂದು ಗೋಪಿ ಆನೆಗೆ ಮರಳು ಮೂಟೆ ಹಾಕಿ ತಾಲೀಮು ನಡೆಸಲಾಯಿತು.
ಈ ಬಾರಿ ದಸರಾದಲ್ಲಿ ಅಭಿಮನ್ಯು, ವಿಕ್ರಮ, ಗೋಪಿ, ಕಾವೇರಿ ಮತ್ತು ವಿಜಯ ಆನೆಗಳು ಭಾಗವಹಿಸಲಿದ್ದು, ಪ್ರತಿನಿತ್ಯ ಈ ಆನೆಗಳಿಗೆ ವಿಶೇಷ ಆಹಾರ ಜೊತೆಗೆ ಸೊಪ್ಪು, ಒಣ ಹುಲ್ಲು, ಹೆಸರುಕಾಳು, ಉದ್ದಿನಕಾಳು, ಗೋಧಿ, ಬೆಲ್ಲ ನೀಡಲಾಗುತ್ತಿದೆ.
ಇದರ ಜೊತೆಗೆ ಪ್ರತಿದಿನವೂ ಆನೆಗಳ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ ಎಂದು ಪಶು ವೈದ್ಯ ಡಾ.ನಾಗರಾಜ್ 'ಈಟಿವಿ ಭಾರತ' ಮಾಹಿತಿ ನೀಡಿದರು.