ಮೈಸೂರು: ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹಗೊಂಡ ನಂತರ ಮೊದಲ ಬಾರಿಗೆ ವಿಶ್ವನಾಥ್ ನಿನ್ನೆ ರಾತ್ರಿ ಮೈಸೂರಿಗೆ ಬಂದಿದ್ದು, ನಾಳೆ ಬೆಳಗ್ಗೆ 10:30ಕ್ಕೆ ಮೈಸೂರಿನ ಪತ್ರಿಕಾ ಭವನದಲ್ಲಿ ಮಹತ್ವದ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಜಿಲ್ಲೆಯ ಹುಣಸೂರು ಕ್ಷೇತ್ರದ ಜೆಡಿಎಸ್ ಶಾಸಕರಾಗಿದ್ದ ಹೆಚ್. ವಿಶ್ವನಾಥ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ಹೋಗಿದ್ದ ನಂತರ ಅನರ್ಹಗೊಂಡು ಜೆಡಿಎಸ್ ಪಕ್ಷದಿಂದಲೂ ಉಚ್ಚಾಟನೆಗೊಂಡಿದ್ದಾರೆ. ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದ ವಿಶ್ವನಾಥ್, ತಾನು ಜೆಡಿಎಸ್ ಪಕ್ಷವನ್ನು ಬಿಡಲು ಕಾರಣ ಏನು? ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಕಾರಣವಾದ ಅಂಶಗಳೇನು? ಎಂಬುದರ ಬಗ್ಗೆ ನಾಳಿನ ಪತ್ರಿಕಾಗೋಷ್ಠಿಯಲ್ಲಿ ಸಂಪೂರ್ಣ ಮಾಹಿತಿ ನೀಡೋದಾಗಿ ಹೇಳಿದ್ದಾರೆ.
ಚುನಾವಣಾ ರಾಜಕೀಯದಿಂದ ನಿವೃತ್ತಿ:
ನಿನ್ನೆ ದೆಹಲಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ವಿಶ್ವನಾಥ್, ಇನ್ನು ಮುಂದೆ ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ. ಚುನಾವಣಾ ರಾಜಕೀಯದಿಂದ ದೂರ ಉಳಿಯಲಿದ್ದೇನೆ ಎಂದು ತಿಳಿಸಿದ್ದ ಅವರು, ಬಿಜೆಪಿ ಸೇರುವ ಬಗ್ಗೆ ಯಾವುದೇ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ನಾಳಿನ ಸುದ್ದಿಗೋಷ್ಠಿಯಲ್ಲಿ ತಮ್ಮ ಮುಂದಿನ ರಾಜಕೀಯ ನಡೆಯ ಬಗ್ಗೆ ತಿಳಿಸಲಿದ್ದಾರೆ ಎನ್ನಲಾಗಿದೆ.