ಮೈಸೂರು: ರಂಗಾಯಣ ನಿರ್ದೇಶಕರು ಟಿಪ್ಪು ನಿಜ ಕನಸುಗಳು ಕೃತಿ ಬರೆದಿದ್ದು, ಆ ಕೃತಿ ನಾಟಕ ರೂಪದಲ್ಲಿ ಬರಲಿದ್ದು, ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ನಿರ್ದೇಶಕ ಅದ್ದಂಡ ಸಿ ಕಾರ್ಯಪ್ಪ ತಬ್ಬಿಬ್ಬಾಗಿದ್ದು, ಮತ್ತೆ ಈ ಬಾರಿ ರಂಗಾಯಣ ಹಾಗೂ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ವಿವಾದದ ಕೇಂದ್ರ ಬಿಂದು ಆಗಲಿದೆ ಎಂಬ ಪ್ರಶ್ನೆ ಎದ್ದಿದೆ.
ಇಂದು ರಂಗಾಯಣದಲ್ಲಿ ಸುದ್ದಿಗೋಷ್ಠಿ ನಡೆಸಿದ ನಿರ್ದೇಶಕ ಅದ್ದಂಡ ಸಿ ಕಾರ್ಯಪ್ಪ, ಸ್ವತಃ ಬರೆದ ಟಿಪ್ಪು ನಿಜ ಕನಸುಗಳು ಪುಸ್ತಕ ನವೆಂಬರ್ 13 ರಂದು ಬಿಡುಗಡೆಯಾಗಲಿದ್ದು, ನವೆಂಬರ್ 20 ರಂದು ಅವರೇ ನಿರ್ದೇಶನ ಮಾಡಿ, ಈ ಪುಸ್ತಕ ನಾಟಕ ರೂಪ ಪಡೆಯಲಿದೆ. 30 ಕಲಾವಿದರ ತಂಡ 100ಕ್ಕೂ ಹೆಚ್ಚು ಪ್ರದರ್ಶನ ನೀಡುವ ಉದ್ದೇಶ ಹೊಂದಿದ್ದು, ಈ ಮೂಲಕ ಜನರಿಗೆ ಟಿಪ್ಪುವಿನ ಬಗ್ಗೆ ಸತ್ಯ ವಿಚಾರಗಳನ್ನು ತಿಳಿಸುವ ಪ್ರಯತ್ನವಾಗಿದೆ ಎಂದರು.
ಟಿಪ್ಪು ನಿಜ ಕನಸುಗಳು ಪುಸ್ತಕ, ಟಿಪ್ಪುವಿನ ನಿಜ ಸಂಗತಿಗಳನ್ನು ಬಯಲಿಗೆಳೆಯುವ ಪ್ರಯತ್ನವಾಗಿದ್ದು, ಇತಿಹಾಸದಲ್ಲಿ ಈತನ ಬಗ್ಗೆ ನೈಜ್ಯ ಘಟನೆಗಳನ್ನು ಮುಚ್ಚಿ ಹಾಕಲಾಗಿದೆ ಹಾಗೂ ತಿರುಚಲಾಗಿದೆ. ಆದ್ದರಿಂದ ಈ ಬಗ್ಗೆ ಜನರಿಗೆ ನೈಜ ಸಂಗತಿಗಳನ್ನು ತಿಳಿಸಲು ನಾನೇ ಸಾಕ್ಷಿಗಳನ್ನು ಸಂಗ್ರಹಿಸಿ ಪುಸ್ತಕ ಬರೆದಿದ್ದೇನೆ. ಈ ನಾಟಕವನ್ನು ನಾನೇ ನಿರ್ದೇಶನ ಮಾಡಿದ್ದೇನೆ ಎಂದು ರಂಗಾಯಣ ನಿರ್ದೇಶಕರಾದ ಕಾರ್ಯಪ್ಪ ತಿಳಿಸಿದರು.
ಈಗಾಗಲೇ ವಿವಾದಕ್ಕೆ ಗುರಿಯಾಗಿರುವ ಟಿಪ್ಪು ವಿಚಾರದ ಬಗ್ಗೆ ಸರ್ಕಾರಿ ಸಂಸ್ಥೆ ರಂಗಾಯಣದಲ್ಲಿ ಏಕೆ ನಾಟಕ ಪ್ರದರ್ಶನ ಮಾಡುತ್ತಿದ್ದೀರಿ ಎಂಬ ಪತ್ರಕರ್ತರ ಪ್ರಶ್ನೆಗೆ ಯಾಕೆ ಮಾಡಬಾರದು, ಹಾಗೇನಾದರೂ ರೂಲ್ಸ್ ಇದೆಯಾ ಎಂದು ಮರು ಪ್ರಶ್ನೆ ಹಾಕಿದರು.
ಒಟ್ಟಾರೆ ಈ ಬಾರಿ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಸಂದರ್ಭದಲ್ಲಿ ರಂಗಾಯಣ ಮತ್ತೆ ಟಿಪ್ಪುವಿನ ವಿಚಾರದಲ್ಲಿ ವಿವಾದಕ್ಕೆ ಗುರಿಯಾಗುವ ಸಾಧ್ಯತೆಯಿದ್ದು, ಈ ಬಗ್ಗೆ ಎಂಎಲ್ಸಿ ಹೆಚ್. ವಿಶ್ವನಾಥ್ ಹಾಗೂ ಪ್ರಗತಿಪರ ಸಾಹಿತಿಗಳು ರಂಗಾಯಣದ ನಿರ್ದೇಶಕರೊಬ್ಬರು ಪ್ರಸ್ತುತ ವಿವಾದದ ವಿಚಾರವಾದ ಟಿಪ್ಪು ವಿಚಾರವನ್ನು ಇಟ್ಟುಕೊಂಡು ಅದರ ನಿರ್ದೇಶಕರೊಬ್ಬರು ನಾಟಕ ಬರೆದು ನಾಟಕ ಪ್ರದರ್ಶನ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಬಹುರೂಪಿ ರಾಷ್ಟ್ರೀಯ ರಂಗೋತ್ಸವದಲ್ಲಿ ಭಾರತೀಯತೆ ಪ್ರಮುಖ ವಸ್ತು ವಿಷಯ: ರಂಗಾಯಣದ ಪ್ರಮುಖ ಬಹುರೂಪಿ ರಾಷ್ಟ್ರೀಯ ರಂಗೋತ್ಸವ ಭಾರತೀಯತೆ ಎಂಬ ಶೀರ್ಷಿಕೆಯಡಿ ಡಿಸೆಂಬರ್ 8 ರಿಂದ 15ವರೆಗೆ ನಡೆಯಲಿದ್ದು, ಈ ರಂಗೋತ್ಸವದಲ್ಲಿ ಭಾರತೀಯತೆ ಎಂಬ ವಸ್ತು ವಿಷಯ ಇಟ್ಟುಕೊಂಡು ನಾಟಕ ಪ್ರದರ್ಶನ ನಡೆಯಲಿದೆ. ಇದರಲ್ಲಿ ಪ್ರದರ್ಶನವಾಗುವ ನಾಟಕಗಳು, ಚಲನಚಿತ್ರೋತ್ಸವ, ಜನಪದೋತ್ಸವ, ವಿಚಾರ ಸಂಕೀರ್ಣ, ಉದ್ಘಾಟನೆಗಳ ಬಗ್ಗೆ ನಂತರ ತಿಳಿಸಲಾಗುವುದು ಎಂದು ಕಾರ್ಯಪ್ಪ ತಿಳಿಸಿದರು.
ಇದನ್ನೂ ಓದಿ: 'ನಾನು ಹಿಂದೂ ರಾಮಯ್ಯ' ಪುಸ್ತಕ ಬಿಡುಗಡೆ ಮಾಡಿದ ಸಿಎಂ ಬೊಮ್ಮಾಯಿ