ಮೈಸೂರು: ಈ ಹಿಂದೆ ಮೈಸೂರು ವಿವಿಯ ಘಟಿಕೋತ್ಸವದಲ್ಲಿ ಬಳಸಲಾಗುತಿದ್ದ ಗೌನನ್ನು ಬದಲಾಯಿಸಲು ಈಗಾಗಲೇ ಚಿಂತನೆ ನಡೆಸಲಾಗಿದೆ ಎಂದು ವಿವಿ ಕುಲಪತಿ ಪ್ರೊ. ಹೇಮಂತ್ ಕುಮಾರ್ ತಿಳಿಸಿದರು.
ಈಟಿವಿ ಭಾರತ್ನೊಂದಿಗೆ ಮಾತನಾಡಿದ ಕುಲಪತಿ ಪ್ರೊ. ಹೇಮಂತ್ ಕುಮಾರ್, ನಿನ್ನೆ ನಡೆದ ಸಿಂಡಿಕೇಟ್ ಸಭೆಯಲ್ಲಿ ಸುಮಾರು 73 ವರ್ಷಗಳಿಂದ ಘಟಿಕೋತ್ಸವದಲ್ಲಿ ಬಳಸಲಾಗುತಿದ್ದ ಗೌನನ್ನು ಬದಲಾಯಿಸಿ ಭಾರತೀಯ ಸಂಪ್ರದಾಯದ ಖಾದಿ ಉಡುಗೆಯನ್ನು ಬಳಸುವ ಬಗ್ಗೆ ಯುಜಿಸಿ ಗೈಡ್ ಲೈನ್ ಪ್ರಕಾರ ಹೇಗಿರಬೇಕು ಎಂದು ಅಧ್ಯಯನ ನಡೆಸಲು ಉಪ ಸಮಿತಿ ರಚಿಸಲಾಗಿದೆ. ಅದರ ವರದಿಯ ಪ್ರಕಾರ ಮುಂದಿನ ವರ್ಷದಿಂದ ಗೌನ್ ಬದಲಿಗೆ ಖಾದಿ ವಸ್ತುಗಳನ್ನು ಘಟಿಕೋತ್ಸವದಲ್ಲಿ ಬಳಸಲು ಚಿಂತನೆ ನಡೆದಿದೆ. ಅದಲ್ಲದೆ ಮೈಸೂರು ಪೇಟವನ್ನೂ ಸಹ ಉಳಿಸಿಕೊಳ್ಳಲು ಪ್ರಯತ್ನಿಸುವುದಾಗಿ ಹೇಳಿದರು.
ಇನ್ನು, ಮಾರ್ಚ್ ವೇಳೆಗೆ ವಿವಿಯಲ್ಲಿ ಖಾಲಿ ಇರುವ ಬೋದಕರ ಹುದ್ದೆ ನೇಮಕಾತಿ ಮಾಡಲು ಅವಕಾಶ ಕೊಡಬೇಕೆಂದು ಮತ್ತೊಮ್ಮೆ ಸರ್ಕಾರಕ್ಕೆ ಮನವಿ ಮಾಡುವುದಾಗಿ ಇದೇ ಸಂದರ್ಭದಲ್ಲಿ ಕುಲಪತಿ ಪ್ರೊ. ಜಿ. ಹೇಮಂತ್ ಕುಮಾರ್ ತಿಳಿಸಿದರು.