ಮೈಸೂರು: ಕೆಆರ್ಎಸ್ನಲ್ಲಿರುವ ಬೃಂದಾವನ ಉದ್ಯಾನದಂತೆ ಕಬಿನಿಯಲ್ಲೂ ಸಹ 48 ಕೋಟಿ ವೆಚ್ಚದಲ್ಲಿ ಉದ್ಯಾನ ನಿರ್ಮಿಸಲು ಬಜೆಟ್‌ನಲ್ಲಿ ಘೋಷಣೆ ಮಾಡಲಾಗುವುದು ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ಹೆಚ್.ಡಿ.ಕೋಟೆ ತಾಲೂಕಿನ ಮೈಸೂರು ಗಡಿಭಾಗದಲ್ಲಿರುವ ಕಂಚಮಳ್ಳಿಯ ಬಳಿ ಸ್ವಾಗತ ಕಮಾನನ್ನು ಉದ್ಘಾಟಿಸಿ ಮಾತನಾಡಿದ ಅವರು, ಅನೇಕ ಜನರು ಹೆಚ್.ಡಿ.ಕೋಟೆ ಹೆಸರು ಕೇಳಿರುತ್ತಾರೆ. ಆದರೆ, ಇಲ್ಲಿನ ಪ್ರವಾಸೋದ್ಯಮ ವೈಶಿಷ್ಟ್ಯತೆಗಳು ತಿಳಿದಿರುವುದಿಲ್ಲ. ಈ ನಿಟ್ಟಿನಲ್ಲಿ ತಾಲೂಕಿನಲ್ಲಿರುವ ಪ್ರಕೃತಿ ಸಂಪತ್ತನ್ನು ಪರಿಚಯಸಲು ಸ್ವಾಗತ ಕಮಾನು ನೆರವಾಗಲಿದೆ ಎಂದರು. ಅದಲ್ಲದೇ ಕೆಆರ್ಎಸ್ನಲ್ಲಿರುವ ಉದ್ಯಾನದಂತೆ ಕಬಿನಿಯಲ್ಲಿಯೂ ಸಹ ಮುಂದಿನ ದಿನಗಳಲ್ಲಿ ಉದ್ಯಾನ ನಿರ್ಮಿಸುವುದಾಗಿ ಭರವಸೆ ನೀಡಿದರು.
ಈ ತಾಲೂಕಿನಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳು ನಡೆಯಲಿದ್ದು, ಒಂದು ಸೇತುವೆ ಹಾಗೂ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಅನುಮೋದನೆ ದೊರಕಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಸರ್ಕಾರ ಕೈಗೊಳ್ಳಲಿದ್ದು, ಈ ಮೂಲಕ ಜಿಲ್ಲೆಯ ಅಭಿವೃದ್ಧಿಯಾಗಲಿದೆ. ಜಿಲ್ಲೆಯ ಸಮಗ್ರ ಪ್ರವಾಸೋದ್ಯಮ ಅಭಿವೃದ್ಧಿಗೂ ಸಹ ನಾನು ಬದ್ಧನಿದ್ದೇನೆ ಎಂದು ತಿಳಿಸಿದರು.