ಮೈಸೂರು : ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಅವರು ನನಗೆ ಮಾತ್ರ ಅಲ್ಲ, ಭಾರತಕ್ಕೆ, ಇಡೀ ವಿಶ್ವಕ್ಕೆ ಸಲಹೆ ಕೊಡುತ್ತಾರೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ವ್ಯಂಗ್ಯವಾಡಿದ್ದಾರೆ.
ಉಸ್ತುವಾರಿ ಸಚಿವರು ಸರಿಯಾಗಿ ಮೈಸೂರಿಗೆ ಬರುತ್ತಿಲ್ಲ ಎಂಬ ಬಿಜೆಪಿ ಎಂಎಲ್‌ಸಿ ಹೆಚ್.ವಿಶ್ವನಾಥ್ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ವಿಶ್ವನಾಥ್ ಅವರಿಂದ ಸಲಹೆಗಳನ್ನು ತೆಗೆದುಕೊಳ್ಳುತ್ತೇನೆ. ಮೈಸೂರಿನ ಉಸ್ತುವಾರಿ ಸಚಿವರಾಗಿ ಅವರು ಏನು ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ, ಕಳೆದ ಎರಡು ವರ್ಷಗಳಿಂದ ಉಸ್ತುವಾರಿ ಸಚಿವನಾಗಿ ನಾನು ಎಷ್ಟು ಬಾರಿ ಮೈಸೂರಿಗೆ ಬಂದಿದ್ದೇನೆ ಎಂಬುವುದನ್ನು ಕೇಳಿ ತಿಳಿದುಕೊಳ್ಳಲಿ ಎಂದು ಕುಟುಕಿದರು.
ಕೆಲವು ದಿನಗಳಿಂದ ರಾಜ್ಯಾದ್ಯಂತ ಸುರಿದ ಭಾರೀ ಮಳೆಗೆ ಹಲವರು ಮನೆ ಕಳೆದುಕೊಂಡಿದ್ದಾರೆ. ರೈತರು ಬೆಳೆ, ಜಾನುವಾರುಗಳನ್ನು ಕಳೆದುಕೊಂಡಿದ್ದಾರೆ. ಇವರೆಲ್ಲರಿಗೂ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ವರದಿ ನೀಡುತ್ತಿದ್ದಂತೆ, ಎರಡು ದಿನಗಳಲ್ಲಿ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ. ಜನರ ಸಂಕಷ್ಟಕ್ಕೆ ಸ್ಪಂದಿಸಲು ಸರ್ಕಾರ ಬದ್ಧವಾಗಿದೆ.
ಮೇ 26ಕ್ಕೆ ದಾವೋಸ್‌ನಿಂದ ಮುಖ್ಯಮಂತ್ರಿಗಳು ಆಗಮಿಸುತ್ತಿದ್ದಂತೆ ಜಿಲ್ಲಾಧಿಕಾರಿಗಳ ಮುಖಾಂತರ ಸಂತ್ರಸ್ತರಿಗೆ ಪರಿಹಾರ ನೀಡಲಾಗುವುದು ಎಂದು ಹೇಳಿದರು. ಕೆಲವು ಜಿಲ್ಲೆಗಳಲ್ಲಿ ಚುನಾವಣಾ ಆಯೋಗದ ನೀತಿ ಸಂಹಿತೆ ಜಾರಿ ಇರುವುದರಿಂದ ಅತಿವೃಷ್ಟಿಗೆ ಒಳಗಾಗಿರುವ ಪ್ರದೇಶಗಳಿಗೆ ಸಚಿವರು ಭೇಟಿ ನೀಡದಂತೆ ಚುನಾವಣಾ ಆಯೋಗ ಆದೇಶ ನೀಡಿದೆ.
ಈ ಹಿನ್ನೆಲೆಯಲ್ಲಿ ಅತಿವೃಷ್ಟಿ ಪ್ರದೇಶಗಳಿಗೆ ತೆರಳಲು ಸಾಧ್ಯವಾಗಿಲ್ಲ. ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರು ಹಿರಿಯ ಅಧಿಕಾರಿಗಳೊಡನೆ ಚರ್ಚೆ ನಡೆಸಿ ಜನರ ಸಂಕಷ್ಟಕ್ಕೆ ಸ್ಪಂದಿಸುವಂತೆ ಸಲಹೆ, ಸೂಚನೆಗಳನ್ನು ನೀಡಲಾಗಿದೆ ಎಂದರು. ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಎರಡು ಸುತ್ತಿನ ಮಾತುಕತೆ ನಡೆಸಿದ್ದೇವೆ.
ಮುಖ್ಯಮಂತ್ರಿಗಳು ರಾಜ್ಯದ ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ಮುಖಾಂತರ ಚರ್ಚೆ ನಡೆಸಿ ಆದಷ್ಟು ಬೇಗನೆ ಅತಿವೃಷ್ಟಿಯ ವರದಿ ನೀಡುವಂತೆ ಸೂಚಿಸಿದ್ದಾರೆ. ರಾಜ್ಯದಲ್ಲಿ ಅತಿ ಹೆಚ್ಚು ಹಾನಿಗೊಳಗಾಗಿರುವ ಎರಡು ತಾಲೂಕು ಸೇರಿದಂತೆ ಎಲ್ಲಾ ತಾಲೂಕುಗಳ ವರದಿ ಬರುತ್ತಿದ್ದಂತೆ ತಕ್ಷಣದಲ್ಲಿ ಪರಿಹಾರ ನೀಡಲಾಗುವುದು, ಜನತೆ ಆತಂಕ ಪಡುವ ಅಗತ್ಯವಿಲ್ಲ ಎಂದರು.
ಜೂನ್ 21ರಂದು ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಪ್ರಧಾನಿ ಮೋದಿಯವರು ಜಿಲ್ಲೆಗೆ ಆಗಮಿಸುತ್ತಿದ್ದು, ಜಿಲ್ಲೆಯ ಅಭಿವೃದ್ಧಿ ಸೇರಿದಂತೆ ರಾಜ್ಯದ ವಿವಿಧ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.
ಓದಿ : ಸ್ವಾಮೀಜಿ ಬಾಯಿಗೆ ತುತ್ತಿಟ್ಟು ಅವರ ಎಂಜಲು ಸೇವಿಸಿದ ಶಾಸಕ ಜಮೀರ್ ಅಹ್ಮದ್