ಮೈಸೂರು: ಹೋಂ ಕ್ವಾರಂಟೈನ್ ಮುಗಿಸಿ ಕರ್ತವ್ಯಕ್ಕೆ ಹಾಜರಾಗುವ ಮೂಲಕ ಜಿಲ್ಲಾ ವರಿಷ್ಠಾಧಿಕಾರಿ ಸಿ. ಬಿ. ರಿಷ್ಯಂತ್ ಅವರು ಇತರೆ ಸಿಬ್ಬಂದಿಗಳಿಗೂ ಆತ್ಮಸ್ಥೈರ್ಯ ತುಂಬಿದ್ದಾರೆ.
ತಿ. ನರಸೀಪುರ ಠಾಣೆಯ ಬುಲೆಟ್ ನಾಪತ್ತೆ ಪ್ರಕರಣ ಭೇದಿಸುವಲ್ಲಿ ಭಾಗವಹಿಸಿದ್ದ ಕಾನ್ಸ್ ಟೇಬಲ್ ಗೆ ಕೊರೊನಾ ಸೋಂಕು ದೃಢಪಟ್ಟಿದ್ದ ಹಿನ್ನೆಲೆ ಆತನ ಸಂಪರ್ಕದಲ್ಲಿದ್ದ ಅಧಿಕಾರಿಗಳು ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದರು.
ಸದ್ಯ ನಿನ್ನೆಗೆ ಕ್ವಾರಂಟೈನ್ ಅವಧಿ ಮುಗಿದಿದ್ದು, ಇಂದು ವರಿಷ್ಠಾಧಿಕಾರಿಯಾದ ರಿಷ್ಯಂತ್ ಅವರು ಕರ್ತವ್ಯಕ್ಕೆ ಹಾಜರಾಗುವ ಮೂಲಕ ಇತರೆ ಸಿಬ್ಬಂದಿಯಲ್ಲೂ ಆತ್ಮಸ್ಥೈರ್ಯ ಮೂಡಿಸಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಪ್ರತಿಯೊಬ್ಬ ಸಿಬ್ಬಂದಿಯೂ ಸನ್ನದ್ಧನಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಕರೆ ನೀಡಿದ್ದಾರೆ.
ಎಲ್ಲಾ ಠಾಣೆಗಳ ಮುಂಭಾಗ 'ಹೆಲ್ಪ್ ಡೆಸ್ಕ್' ಮಾಡಲಾಗಿದೆ. ಇನ್ನು ಮುಂದೆ ಠಾಣೆಗಳನ್ನು ಬಂದ್ ಮಾಡುವುದಿಲ್ಲ. ಹೆಚ್. ಡಿ ಕೋಟೆಯಲ್ಲಿ ಕ್ವಾರಂಟೈನ್ ಆಗಿದ್ದ ಸಿಬ್ಬಂದಿಯಲ್ಲಿ ಒಬ್ಬನನ್ನು ಹೊರತುಪಡಿಸಿ ಉಳಿದವರ ವರದಿ ನೆಗೆಟಿವ್ ಬಂದಿದೆ. ಜಿಲ್ಲೆಯ ಜನರು ಭಯ ಪಡುವ ಆಗತ್ಯ ಇಲ್ಲ ಎಂದು ಅಭಯ ನೀಡಿದರು.