ಮೈಸೂರು: ಜಮಾಅತ್ ಇಸ್ಲಾಂ ಸಂಘಟನೆ ಸಭೆಯಲ್ಲಿ ಮೈಸೂರಿನಿಂದ 43 ಜನ ಭಾಗವಹಿಸಿದ್ದರು. ಈಗಾಗಲೇ 30 ಜನರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 10 ಜನರ ಸ್ಯಾಂಪಲ್ ಪರೀಕ್ಷೆ ಮಾಡಲಾಗಿದೆ. ಇನ್ನೂ 15 ಜನ ದೆಹಲಿಯಲ್ಲಿ ಇದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ತಿಳಿಸಿದರು.
ಫೇಸ್ ಬುಕ್ ಲೈವ್ನಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿ ಮೂರು ನಿರಾಶ್ರಿತರ ಕೇಂದ್ರ ಸ್ಥಾಪನೆ ಮಾಡಲಾಗಿದೆ. ಮೈಸೂರಿನ ಹಲವು ಸಂಘ ಸಂಸ್ಥೆಗಳು ಕೂಡ ಸಹಕಾರ ನೀಡಿ ಜಿಲ್ಲಾಡಳಿತಕ್ಕೆ ಬೆಂಬಲವಾಗಿ ನಿಂತಿದ್ದಾರೆ ಎಂದರು.
ನಂಜನಗೂಡು ಪಟ್ಟಣಕ್ಕೆ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ. ಯಾರೂ ಆತಂಕಕ್ಕೆ ಒಳಗಾಗಬಾರದು. ರಾಜ್ಯ ಸರ್ಕಾರ ನಿಮ್ಮೊಂದಿಗಿದೆ ಧೈರ್ಯವಾಗಿರಿ ಎಂದರು.
ಶುಕ್ರವಾರದಿಂದ ಮನೆ ಮನೆಗೆ ದಿನಸಿ ತಲುಪಲಿದೆ. ಸಾರ್ವಜನಿಕರು ನಮ್ಮ ಜೊತೆ ಸಹಕಾರ ನೀಡಬೇಕಿದೆ. ಯಾರು ಕೂಡ ಮನೆಯಿಂದ ಹೊರಗಡೆ ಬರಬೇಡಿ. ನಿಮಗೆ ಬೇಕಾಗುವ ಆಹಾರ ಪದಾರ್ಥಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.