ಮೈಸೂರು: ಪರಿಶಿಷ್ಟ ಜಾತಿ ವರ್ಗದವರಿಗೆ ಹೇರ್ ಕಟಿಂಗ್ ಮಾಡಿದ್ದ ಕುಟುಂಬಕ್ಕೆ ಊರಿನ ಮುಖಂಡರು ಸಾಮಾಜಿಕ ಬಹಿಷ್ಕಾರ ಹಾಕಿ ದೌರ್ಜನ್ಯ ಎಸಗಿರುವ ಆರೋಪ ಪ್ರಕರಣ ನಂಜನಗೂಡು ತಾಲೂಕಿನ ಹಲ್ಲರೆ ಗ್ರಾಮದಲ್ಲಿ ನಡೆದಿದೆ.
ಪರಿಶಿಷ್ಟ ವರ್ಗದವರಿಗೆ ಹೇರ್ ಕಟಿಂಗ್ ಮಾಡಿದ್ದಕ್ಕೆ ತಮ್ಮ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿ ದಂಡ ವಿಧಿಸಲಾಗಿದೆ ಎಂದು ಕ್ಷೌರಿಕ ಮಲ್ಲಿಕಾರ್ಜುನ ಶೆಟ್ಟಿ ಆರೋಪಿಸಿದ್ದಾರೆ. ಊರಿನ ಮುಖಂಡರು ಪರಿಶಿಷ್ಟ ವರ್ಗದವರಿಗೆ ಹೇರ್ ಕಟಿಂಗ್ ಮಾಡಬಾರದು ಎಂದು ನಿರ್ಬಂಧ ವಿಧಿಸಿದ್ದರು. ಆದರೆ ಮಲ್ಲಿಕಾರ್ಜುನ ಶೆಟ್ಟಿ ಸರ್ಕಾರದ ಆದೇಶದಂತೆ ಗ್ರಾಮದ ಪ್ರತಿಯೊಬ್ಬರಿಗೂ ಕಟಿಂಗ್ ಮಾಡುತ್ತೇನೆ ಎಂದು ಪರಿಶಿಷ್ಟ ವರ್ಗದವರಿಗೂ ಕಟಿಂಗ್ ಮಾಡಿದ್ದು, ಈ ಕಾರಣದಿಂದ ಗ್ರಾಮದ ಮುಖಂಡ ಚೆನ್ನನಾಯಕ ಹಾಗೂ ಈತನ ಸಹಚರರು ಸೇರಿ 50,000 ದಂಡ ಜೊತೆಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರಂತೆ.
ಈ ಸಾಮಾಜಿಕ ಬಹಿಷ್ಕಾರದಿಂದ ಮಲ್ಲಿಕಾರ್ಜುನ ಶೆಟ್ಟಿ ಕುಟುಂಬ ಬಹಳ ಸಂಕಷ್ಟದಲ್ಲಿದ್ದು, ಇದನ್ನು ತೆರವುಗೊಳಿಸುವುದಕ್ಕೆ ತಹಶೀಲ್ದಾರ್ ಕಚೇರಿಗೆ ದೂರು ನೀಡಿದ್ದಾರೆ. 3 ತಿಂಗಳಿನಿಂದ ಕುಟುಂಬ ಬಹಿಷ್ಕಾರಕ್ಕೆ ಒಳಗಾಗಿದೆ. ಈ ಬಹಿಷ್ಕಾರ ತೆರವುಗೊಳಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ ಎನ್ನುತ್ತಾರೆ ಮಲ್ಲಿಕಾರ್ಜುನ ಶೆಟ್ಟಿ. ಈ ಕುರಿತು ನಂಜನಗೂಡು ತಹಶೀಲ್ದಾರ್ ಮಹೇಶ್ ಕುಮಾರ್ ಪೊಲೀಸರಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.