ಮೈಸೂರು : ಸಿಎಂ ರೇಸ್‌ನಲ್ಲಿ ಸಿದ್ದರಾಮಯ್ಯ ಅವರೊಬ್ಬರೇ ಇಲ್ಲ. ಪಕ್ಷದ ಹಲವು ಹಿರಿಯರಿದ್ದಾರೆ ಎಂದು ಮಾಜಿ ಸಂಸದ ಕೆ ಹೆಚ್ ಮುನಿಯಪ್ಪ ಪರೋಕ್ಷವಾಗಿ ಮಾಜಿ ಸಿಎಂಗೆ ಎಚ್ಚರಿಕೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಹಿರಿಯರ ಸಾಲೇ ಇದೆ. ಮಲ್ಲಿಕಾರ್ಜುನ ಖರ್ಗೆ, ಜಿ. ಪರಮೇಶ್ವರ್, ಡಿ ಕೆ ಶಿವಕುಮಾರ್ ಸೇರಿ ಹಲವರಿದ್ದಾರೆ. ನಾನಂತೂ ಸಿಎಂ ರೇಸ್‌ನಲ್ಲಿಲ್ಲ. ಸಿಎಂ ಯಾರಾಗಬೇಕೆಂಬ ನಿರ್ಧಾರ ಹೈಕಮಾಂಡ್ ಮಾಡುತ್ತೆ. ಚುನಾವಣೆಗೆ ಎರಡು ವರ್ಷ ಬಾಕಿ ಇದೆ. ಸಿಎಂ ಚರ್ಚೆ ಈಗ ಬೇಡ ಎಂದರು.
ಮೀಸಲಾತಿ, ಒಳ ಮೀಸಲಾತಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರದ ಮಾಜಿ ಸಚಿವರು, ಕಾಂತರಾಜ ಆಯೋಗ ಹಾಗೂ ಸದಾಶಿವ ಆಯೋಗ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳಬೇಕು. ಸುಖಾಸುಮ್ಮನೆ ಚರ್ಚೆ ಮಾಡೋದು ಸರಿಯಲ್ಲ. ಜೊತೆಗೆ ಮೀಸಲಾತಿ ಕೇವಲ ಹೋರಾಟಕ್ಕೆ ಮಾತ್ರ ಮೀಸಲಾಗಬಾರದು ಎಂದರು.
ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಬಸವಣ್ಣನವರ ಚಿಂತನೆ ಬಗ್ಗೆ ಗೌರವವಿದ್ದರೆ, ಬಸವಣ್ಣನವರ ತತ್ವ ಪಾಲಿಸುವವರಾದರೆ ಮೀಸಲಾತಿಯ ಬಗ್ಗೆ ವೈಜ್ಞಾನಿಕವಾಗಿ ಪರಿಶೀಲನೆ ಮಾಡಿ ಅವಶ್ಯವಿರುವವರಿಗೆ ಮೀಸಲಾತಿ ನೀಡಿ ಎಂದರು.
ಸಿದ್ದರಾಮಯ್ಯ ಬ್ರಿಟಿಷ್‌ನವರಿದ್ದಂತೆ ಎಂಬ ವಿಶ್ವನಾಥ್ ಹೇಳಿಕೆ ವಿಚಾರವಾಗಿ ಮಾತನಾಡಿ, ವಿಶ್ವನಾಥ್ ಬಹಳ ಬುದ್ಧಿವಂತ ಇದ್ದಾನೆ. ಏನಾದ್ರೂ ಮಾಡಿ ಕಾಂಗ್ರೆಸ್‌ನಲ್ಲಿ ಬಿರುಕು ಮೂಡಿಸುವ ಚಿಂತನೆ ವಿಶ್ವನಾಥ್‌ಗೆ ಇದೆ. ಹಾಗಾಗಿ, ಈ ರೀತಿಯ ಹೇಳಿಕೆ ನೀಡ್ತಿದ್ದಾರೆ ಎಂದು ಕುಟುಕಿದರು.
ನಮ್ಮಲ್ಲಿ ಮೂಲ ಕಾಂಗ್ರೆಸ್‌ನವರು, ವಲಸೆ ಕಾಂಗ್ರೆಸ್‌ನವರು ಅಂತಾ ಏನೂ ಇಲ್ಲ. ನಾವೆಲ್ಲರೂ ಒಟ್ಟಿಗೆ ಇದ್ದೇವೆ. ಹೈಕಮಾಂಡ್ ಹೇಳಿದಂತೆ ಸಿದ್ದರಾಮಯ್ಯ ಕೆಲಸ ಮಾಡ್ತಿದ್ದಾರೆ ಎಂದು ಹೇಳಿದರು. ಬಿಜೆಪಿಯನ್ನ ತಡೆಯುವ ಸಲುವಾಗಿ ತನ್ವೀರ್ ಸೇಠ್ ಮುಂದಾಗಿದ್ದರು.
ಆ ವೇಳೆ ಕೆಲವು ಏರುಪೇರುಗಳಾಗಿರಬಹುದು. ಅದನ್ನ ರಾಜ್ಯಮಟ್ಟದ ನಾಯಕರು ತಾರಕಕ್ಕೇರಿಸದೆ ಚರ್ಚೆ ಮಾಡಿ ಬಗೆಹರಿಸಬೇಕು. ಕಾಂಗ್ರೆಸ್ ಪಕ್ಷದಲ್ಲಿ ಸಮಸ್ಯೆಗಳು ಬಂದ್ರೆ ಒಟ್ಟಿಗೆ ಕೂತು ಬಗೆಹರಿಸಬೇಕು. ಏನಾದ್ರೂ ಏರುಪೇರುಗಳಿದ್ರೆ ಸರಿಪಡಿಸಿಕೊಳ್ಳಬೇಕು ಎಂದರು.
ಓದಿ:ಮಸ್ಕಿ ಶಿಕಾರಿಗೆ ಹೊರಟ ವಿಜಯೇಂದ್ರ: ಕೈ ಭದ್ರಕೋಟೆಯಲ್ಲಿ ಕಬ್ಬಿಣದ ಕಡಲೆಯಾಗುತ್ತಾ ಗೆಲುವು?
ಉಪ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ. ಕೇಂದ್ರ ಹಾಗೂ ರಾಜ್ಯ ಬಿಜೆಪಿ ಆಡಳಿತ ಜನರಿಗೆ ಗೊತ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆ ಆಗ ಹೇಗಿತ್ತು, ಈಗ ಹೇಗಿದೆ ಅನ್ನೋದು ಜನರಿಗೆ ತಿಳಿದಿದೆ. ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದಾರೆ. ಈ ಚುನಾವಣೆಯಲ್ಲಿ ಜನ ಬಿಜೆಪಿಗೆ ಪಾಠ ಕಲಿಸುತ್ತಾರೆ ಎಂದರು.
ಲಾಕ್ಡೌನ್ನಲ್ಲಿ ಹಣ ದೋಚಿದ್ದಾರೆ. ಆ ಹಣವನ್ನ ಈಗ ಚುನಾವಣೆಯಲ್ಲಿ ಖರ್ಚುಮಾಡಿ ಗೆಲ್ಲಲು ಮುಂದಾಗಿದ್ದಾರೆ. ಇದು ಜನರಿಗೂ ಗೊತ್ತಿದೆ. ನರೇಂದ್ರ ಮೋದಿ ವಾರಕ್ಕೊಮ್ಮೆ ಮಾತ್ನಾಡೋಕೆ ಬರ್ತಾರೆ. ಅವ್ರು ವಾರಕ್ಕೊಮ್ಮೆ ತಪಸ್ಸಿನಿಂದ ಬಂದು ಮಾತನಾಡುತ್ತಾರೆ. ಮತ್ತೆ ಜನರ ಕಡೆ ತಿರುಗಿಯೂ ನೋಡಲ್ಲ ಎಂದರು.