ಮೈಸೂರು: ನಾಯಿಗೆ ನಾರಾಯಣಸ್ವಾಮಿ ದೇವರು ಎಂದು ಕರೆಯುತ್ತಾರೆ. ನಾಯಿಗೆ ಇರುವ ನಿಯತ್ತು ಮನುಷ್ಯರಿಗೂ ಇರುವುದಿಲ್ಲ. ಇಂತಹ ನಾಯಿಯ ಪದವನ್ನು ಈ ರೀತಿ ಬಳಕೆ ಮಾಡಿರುವುದು ರಾಜಕೀಯ ಮುತ್ಸದ್ದಿಯಾದ ಸಿದ್ದರಾಮಯ್ಯ ಅವರಿಗೆ ಶೋಭೆ ತರುವುದಲ್ಲ ಎಂದು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ ಟಿ. ದೇವೇಗೌಡ ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕುಟುಕಿದ್ದಾರೆ.
ಶುಕ್ರವಾರ ಮೈಸೂರಿನ ತಮ್ಮ ಶಾಸಕರ ಕಚೇರಿ ಇರುವ ಜಲದರ್ಶಿನಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ವೇಳೆ ಮಾತನಾಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮೈಸೂರು ಮಹಾನಗರ ಪಾಲಿಕೆಗೆ ಹೊಂದಿಕೊಂಡಿರುವ 10 ಗ್ರಾಮ ಪಂಚಾಯಿತಿ ವ್ಯಾಪ್ತಿ ನಾಲ್ಕು ಪಟ್ಟಣ ಪಂಚಾಯಿತಿಗಳನ್ನಾಗಿ ರಚಿಸಲಾಗಿದೆ. ಅದರಲ್ಲಿ ಹೂಟಗಳ್ಳಿ ನಗರಸಭೆ ಆಗಿ ಬೊಗಾದಿ, ರಮ್ಮನಹಳ್ಳಿ, ಶ್ರೀರಾಂಪುರ, ಕಡಕೊಳ ನಾಲ್ಕು ಪಟ್ಟಣ ಪಂಚಾಯಿತಿಗಳು ಕಾರ್ಯನಿರ್ವಹಿಸುತ್ತಿವೆ. ಈ ವ್ಯಾಪ್ತಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಪದ ಬಳಕೆ ಸರಿಯಲ್ಲ : ನಾಯಿಯನ್ನು ನಾರಾಯಣಸ್ವಾಮಿ ಎಂದು ಕರೆಯುವುದು ರೂಢಿ. ನಾಯಿಗೆ ಇರುವ ನಿಯತ್ತು ಮನುಷ್ಯರಿಗೂ ಇರುವುದಿಲ್ಲ. ತಮ್ಮ ಕ್ಷೇತ್ರವನ್ನು ನೋಡಿಕೊಳ್ಳಲು ಆಗದವರು, ರಾಜ್ಯದ ಮತ್ತು ರಾಷ್ಟ್ರದ ಬಗ್ಗೆ ಮಾತನಾಡುತ್ತಾರೆ. ಸಿದ್ದರಾಮಯ್ಯ ರಾಜಕೀಯ ಮುತ್ಸದ್ಧಿ ಇದ್ದಾರೆ. ಅವರು ಈ ರೀತಿ ಪದಬಳಕೆ ಮಾಡುವುದು ಸರಿಯಲ್ಲ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಅವರನ್ನು ಟೀಕಸಿದರು.
ಪಂಚರತ್ನ ಯಾತ್ರೆಗೆ ಜನಸಾಗರ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 123 ಸ್ಥಾನಗಳನ್ನು ಗೆಲ್ಲಲೇಬೇಕೆಂಬ ಗುರಿ ಹೊಂದಿರುವ ಜೆಡಿಎಸ್ ಪಕ್ಷವು, ಸ್ವಂತ ಶಕ್ತಿಯ ಮೇಲೆ ಸರ್ಕಾರ ರಚಿಸಬೇಕೆಂಬ ಉದ್ದೇಶ ಹೊಂದಿದೆ. ಜೆಡಿಎಸ್ ಪಕ್ಷದ ಪಂಚರತ್ನ ಯಾತ್ರೆಗೆ ಜನಸಾಗರವೇ ಸೇರುತ್ತಿದೆ. ನಿತ್ಯ 20 ಗಂಟೆಗೂ ಹೆಚ್ಚಿನ ಸಮಯ ನಾಯಕರಾದ ಕುಮಾರಸ್ವಾಮಿ ಓಡಾಟ ನಡೆಸುತ್ತಿದ್ದು, ಅವರ ಪಂಚರತ್ನ ಯಾತ್ರೆಗೆ ಜನಸಾಗರವೇ ಸೇರುತ್ತಿದೆ.
ನವ ಕರ್ನಾಟಕ ನಿರ್ಮಾಣಕ್ಕಾಗಿ ಮಹಾಯಾತ್ರೆ ಹೆಸರಿನಲ್ಲಿ ಈ ರಥಯಾತ್ರೆ ಕೈಗೊಳ್ಳಲಾಗುತ್ತಿದೆ. ಸಮಗ್ರ ಕರ್ನಾಟಕ ಅಭಿವೃದ್ಧಿಗೆ ಪಂಚರತ್ನ ಪರಿಪೂರ್ಣ ಪರಿಹಾರ ಎಂದು ಬಿಂಬಿಸಲಾಗುತ್ತಿದೆ. ಶಿಕ್ಷಣವೇ ಆಧುನಿಕ ಶಕ್ತಿ, ಆರೋಗ್ಯ ಸಂಪತ್ತು, ಕೃಷಿ ಚೈತನ್ಯ, ಯುವ ನವ ಮಾರ್ಗ ಮತ್ತು ಮಹಿಳಾ ಸಬಲೀಕರಣ ಹಾಗೂ ವಸತಿ ಆಸರೆ ಪಂಚರತ್ನ ಯೋಜನೆಗಳಾಗಿವೆ ಎಂದು ಮಾಹಿತಿ ನೀಡಿದರು.
ಭ್ರಷ್ಟಾಚಾರ ಇಲ್ಲದ ಜೆಡಿಎಸ್ ಆಡಳಿತ:ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಸರ್ಕಾರವು ಭ್ರಷ್ಟಾಚಾರ ಇಲ್ಲದ ಆಡಳಿತವನ್ನು ನೀಡಿದೆ. ಒಂದು ಬಾರಿ ಪೂರ್ತಿ ಪ್ರಮಾಣದ ಅಧಿಕಾರವನ್ನ ನೀಡಲು ಬಯಸಿದ್ದಾರೆ. ಮೈಸೂರಿನಲ್ಲಿ ಜೆಡಿಎಸ್ ಪರ ಅಲೆ ಶುರುವಾಗಿದೆ. ಎಲ್ಲ ಶಾಸಕರು ತಮ್ಮ ತಮ್ಮ ಕ್ಷೇತ್ರಗಳನ್ನು ನೋಡಿಕೊಳ್ಳುತ್ತಾರೆ. ನಾನು ಮೈಸೂರು ಜಿಲ್ಲೆಯಲ್ಲಿ ಓಡಾಡುತ್ತೇನೆ ಎಂದು ಅಭಿಪ್ರಾಯ ತಿಳಿಸಿದರು.
ಸಿಎಂಗೆ ಅಭಿನಂದಿಸಿದ ಶಾಸಕರು: ಚಾಮುಂಡೇಶ್ವರಿ ಕ್ಷೇತ್ರದ 10 ಗ್ರಾಮ ಪಂಚಾಯಿತಿಗಳನ್ನು ಮೇಲ್ದರ್ಜೆಗೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಏರಿಸಿದ್ದರು, ಆದರೆ, ಈ ಭಾಗದ ಜನರಿಗೆ ಖಾತೆ ಹಾಗೂ 11ಬಿ ಸಿಗುತ್ತಿರಲಿಲ್ಲ. ಆದ್ದರಿಂದ ಜನರಿಗೆ ಕಷ್ಟ ಇತ್ತು ಇದರ ಬಗ್ಗೆ ವಿಧಾನ ಸೌಧದಲ್ಲಿ ಚರ್ಚೆ ಮಾಡಿ ಸಿ ಎಂ ಹಾಗೂ ಸಚಿವರ ಗಮನಕ್ಕೆ ತರಲಾಯಿತು. ತಕ್ಷಣ ಒಂದು ಸಮಿತಿಯನ್ನ ರಚನೆ ಮಾಡಿ ಒಂದು ತಿದ್ದುಪಡಿ ತಂದು ಹಳೆ ರೀತಿಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಖಾತೆ ಮತ್ತು 11ಬಿ ಕೊಡಲು ಸೂಚನೆ ಸಿಕ್ಕಿತು. ಆದ್ದರಿಂದ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಈಗಿನ ಬಸವರಾಜ ಬೊಮ್ಮಾಯಿ ಹಾಗೂ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಇದನ್ನೂಓದಿ:'ಕೈ' ಕಲಿಗಳ ಮೊದಲ ಪಟ್ಟಿ ಹೈಕಮಾಂಡ್ ಅಂಗಳಕ್ಕೆ, ಸಂಕ್ರಾಂತಿ ಬಳಿಕ ಬಿಡುಗಡೆ