ಮೈಸೂರು: ಎಸ್ಡಿಪಿಐ ಮತಾಂಧತೆ, ಕಾಂಗ್ರೆಸ್ ರಾಜಕೀಯದಿಂದ ಪೂರ್ವ ಬೆಂಗಳೂರಿನಲ್ಲಿ ಗಲಭೆ ನಡೆದಿದೆ. ಇದಕ್ಕೆ ಇಬ್ಬರು ಮುಖಂಡರ ವಾಟ್ಸ್ ಆ್ಯಪ್ ಚಾಟ್ ಪೂರಕ ದಾಖಲೆಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಹೇಳಿಕೆ ನೀಡಿದ್ದಾರೆ.
ಬಿಜೆಪಿ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಸಿ. ಟಿ. ರವಿ ಮಾಧ್ಯಮಗಳ ಜೊತೆ ಮಾತನಾಡುತ್ತಾ, ಗಲಭೆಯಲ್ಲಿ ಕಾಂಗ್ರೆಸ್ ಮತ್ತು ಎಸ್ಡಿಪಿಐ ಮುಖಂಡರ ಸಂಚಿನ ಉದ್ದೇಶ ಬಯಲಾಗಿದೆ. ಒಂದು ವೇಳೆ ಈ ಕೆಲಸವನ್ನು ಬಿಜೆಪಿ ಕಾರ್ಯಕರ್ತರು ಮಾಡಿದ್ದರೆ ಕಾಂಗ್ರೆಸ್‌ನವರು ಬಿಡುತ್ತಿದ್ದರಾ?, ರಾಹುಲ್ ಗಾಂಧಿಯೇ ಬಂದು ಬಟ್ಟೆ ಹರಿದುಕೊಳ್ಳುತ್ತಿದ್ದರು. ಇದನ್ನು ರಾಷ್ಟ್ರೀಯ ಅಲ್ಲ, ಅಂತಾರಾಷ್ಟ್ರೀಯ ವಿವಾದ ಮಾಡುತ್ತಿದ್ದರು ಎಂದರು.
ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಾಟೆ ಕಾಂಗ್ರೆಸ್ ಪಕ್ಷಕ್ಕೆ ಮುಳುವಾಗಲಿದ್ದು, ಶಿರಾ ಮತ್ತು ಆರ್. ಆರ್. ನಗರದ ವಿಧಾನ ಪರಿಷತ್ ಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ. ಕಾಂಗ್ರೆಸ್‌ನವರು ದಲಿತ ಮತ್ತು ಅಲ್ಪಸಂಖ್ಯಾತರು ಎಂಬ ಪ್ರಶ್ನೆ ಬಂದಾಗ ದಲಿತರನ್ನು ಕೈಬಿಟ್ಟು ಅಲ್ಪಸಂಖ್ಯಾತರನ್ನು ಆರಿಸಿಕೊಳ್ಳುತ್ತಾರೆ ಎಂಬುದು ಈ ಘಟನೆಯಿಂದಲೇ ಸ್ಪಷ್ಟವಾಗುತ್ತದೆ ಎಂದು ಟೀಕಿಸಿದರು.
ಎಸ್ಡಿಪಿಐ ಬ್ಯಾನ್ ಬಗ್ಗೆ ಕಾನೂನು ಪ್ರಕ್ರಿಯೆ ಆಗಬೇಕು. ಈ ಬಗ್ಗೆ ಪೋಲಿಸ್ ಇಲಾಖೆ ಹಾಗೂ ಗೃಹ ಇಲಾಖೆ ಸೂಕ್ತ ದಾಖಲೆಯನ್ನು ಸಂಗ್ರಹಿಸುತ್ತಿದೆ. ಸುಮ್ಮನೆ ಬ್ಯಾನ್ ಮಾಡಿದರೆ ಕಾನೂನು ತೊಡಕಾಗುತ್ತದೆ ಸ್ಪಷ್ಟಪಡಿಸಿದರು.