ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವಿರುದ್ಧ ಅಪಪ್ರಚಾರ ಮಾಡುವವರ ವಿರುದ್ದ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುತ್ತೇವೆ ಎಂದು ಕುಲಪತಿ ಪ್ರೊ.ಎಸ್. ವಿದ್ಯಾಶಂಕರ್ ಎಚ್ಚರಿಕೆ ನೀಡಿದ್ದಾರೆ.
ಕರಾಮುವಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಯುಜಿಸಿ ವಿಧಿಸಿರುವ ನಿಯಮಗಳನ್ನು ಮುಕ್ತ ವಿವಿ ಚಾಚೂ ತಪ್ಪದೇ ಪಾಲಿಸುತ್ತಿದೆ. ಯಾವುದೇ ಹಂತದಲ್ಲೂ ನಿಯಮಗಳ ಉಲ್ಲಂಘನೆ ಆಗಿಲ್ಲ. ಆದರೆ, ಇತ್ತೀಚೆಗೆ ಕೆಲ ವ್ಯಕ್ತಿಗಳು ಮುಕ್ತ ವಿವಿ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಈ ರೀತಿ ಅಪಪ್ರಚಾರ ಮಾಡುತ್ತಿರುವವರು ನಮ್ಮ ಬಳಿ ಬಂದು ಚರ್ಚೆ ನಡೆಸಲಿ. ನಾವು ಅವರಿಗೆ ಸೂಕ್ತ ಮಾಹಿತಿ ನೀಡುತ್ತೇವೆ ಎಂದರು.
ಹಳೆ ವಿಚಾರಗಳನ್ನು ಮುಂದಿಟ್ಟುಕೊಂಡು ಮುಕ್ತ ವಿವಿ ಬಗ್ಗೆ ಕೆಟ್ಟ ಅಭಿಪ್ರಾಯ ಬರುವಂತೆ ಮಾಡಬಾರದು. ಅಪಪ್ರಚಾರ ಮಾಡಿದರೆ ವಿದ್ಯಾರ್ಥಿಗಳ ಆತ್ಮಸ್ಥೈರ್ಯ ಕುಂದಲಿದೆ. ಇನ್ನು ಮುಂದೆ ಯಾರಾದರೂ ಅಪಪ್ರಚಾರ ಮಾಡಿದರೆ ಅಂತಹವರ ವಿರುದ್ಧ ಕಾನೂನು ರೀತಿಯ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ವಾರ್ನಿಂಗ್ ಮಾಡಿದರು.
ಇನ್ನೊಂದು ವಾರದಲ್ಲಿ ಪ್ರವೇಶಾತಿ ಆರಂಭ:
ಎಲ್ಲ ಕೋರ್ಸ್ಗಳಿಗೆ ಪ್ರವೇಶಾತಿ ಆರಂಭವಾಗುತ್ತದೆ. ಎಲ್ಲ ವಿದ್ಯಾರ್ಥಿಗಳಿಗೂ ಲಸಿಕೆ ನೀಡಲು ಡಿಸಿಗೆ ಪತ್ರ ಬರೆದಿದ್ದೇವೆ. ಜಿಲ್ಲಾಡಳಿತದಿಂದಲೂ ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದ್ದು, ಶೀಘ್ರದಲ್ಲೇ ಎಲ್ಲ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲಾಗುವುದು. ಮುಕ್ತ ವಿವಿಗೆ ಪ್ರವೇಶಾತಿ ಸಂಖ್ಯೆ ಹೆಚ್ಚಾಗಿದೆ. ಎಷ್ಟೇ ವಿದ್ಯಾರ್ಥಿಗಳು ಬಂದರೂ ಪ್ರವೇಶಾತಿ ನೀಡ್ತಿವಿ ಎಂದರು.
25 ವರ್ಷ ಪೂರೈಸಿದ ಕರಾಮುವಿ:
ಕರಾಮುವಿ 25 ವರ್ಷ ಪೂರೈಸಿದ ಹಿನ್ನೆಲೆ, ಹೊಸ ಹೊಸ ಕಾರ್ಯಕ್ರಮ ಪರಿಚಯಿಸಲಾಗುವುದು. ಪ್ರವೇಶಾತಿಯಿಂದ ಫಲಿತಾಂಶದ ವರೆಗೂ ಸಂಪೂರ್ಣ ಗಣಕೀಕರಣ ಮಾಡಲಾಗುವುದು. ಆನ್ಲೈನ್ ಮೂಲಕ ಐಎಎಸ್, ಕೆಎಎಸ್, ಬ್ಯಾಂಕಿಂಗ್ ಪರೀಕ್ಷೆಯ ತರಬೇತಿ ನೀಡಲಾಗುವುದು. ಯುಜಿ, ಪಿಜಿ ಜೊತೆಗೆ ಪಿಹೆಚ್‌ಡಿ ಕಾರ್ಯಕ್ರಮಗಳ ಅಳವಡಿಕೆ ಮಾಡಲಾಗುವುದು. ಬಿ.ಎಡ್ ಕೋರ್ಸ್ ಸೀಟು ಹೆಚ್ಚಳಕ್ಕೆ ಕೆಎಸ್ಒಯುನಿಂದ ಎನ್.ಸಿ.ಟಿ.ಇಗೆ ಪತ್ರ ಬರೆಯಲಾಗುವುದು ಎಂದರು.