ಮೈಸೂರು: ಜನ ವಿರೋಧಿ ಚಟುವಟಿಕೆಗಳಿಗೆ ನನ್ನ ಸಮ್ಮತಿ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸ್ವಪಕ್ಷೀಯ ಸಚಿವ ಸಿ.ಪಿ.ಯೋಗೇಶ್ವರ್ಗೆ ಕುಟುಕಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರ 130ನೇ ಜನ್ಮ ದಿನಾಚರಣೆ ಹಿನ್ನೆಲೆ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಮೈಸೂರಿನಲ್ಲಿ ಹೆಲಿ ಟೂರಿಸಂಗೆ ಮರ ಕಡಿಯುವ ವಿಚಾರವಾಗಿ, ಮೈಸೂರು ಜನರ ವಿರೋಧದ ಯೋಜನೆಗೆ ನನ್ನ ಸಮ್ಮತಿ ಇಲ್ಲ. ಮರ ಕಡಿದು ಹೆಲಿ ಟೂರಿಸಂ ಬಗ್ಗೆ ನನಗೆ ಮಾಹಿತಿಯೇ ಇಲ್ಲ. ಮಾಧ್ಯಮಗಳಲ್ಲಿ ಈ ವಿಚಾರವನ್ನ ಗಮನಿಸಿದ್ದೇನೆ ಎಂದರು.
ಅರಣ್ಯ ಇಲಾಖೆಯು ಜನರ ಅಭಿಪ್ರಾಯ ಕೇಳಲು ಸಭೆ ಕರೆದಿದೆ. ಸಭೆಯ ತೀರ್ಮಾನದಂತೆ ಎಲ್ಲವೂ ನಡೆಯುತ್ತದೆ. ಜನ ವಿರೋಧಿ ಚಟುವಟಿಕೆಗಳನ್ನು ನಡೆಯಲು ನಾನು ಬಿಡುವುದಿಲ್ಲ ಎಂದು ಹೇಳಿದರು.
ಕೋವಿಡ್ ಹೆಚ್ಚಳ:
ಮೈಸೂರಿನಲ್ಲಿ ಕೊರೊನಾ ಪ್ರಕರಣಗಳ ಪ್ರಮಾಣ ಹೆಚ್ಚಾದ ವಿಚಾರವಾಗಿ ಪ್ರತಿಕ್ರಿಯಿಸಿ, ಪಾಸಿಟಿವ್ ಪ್ರಕರಣಗಳು ಹೆಚ್ಚಾಗಿದ್ದರೂ ಕೂಡ ಮೈಸೂರಿಗೆ ಪ್ರತ್ಯೇಕ ನಿಯಮ ಜಾರಿ ಇಲ್ಲ. ರಾಜ್ಯದ ಬೇರೆ ಜಿಲ್ಲೆಗೆ ಏನು ಮಾರ್ಗಸೂಚಿ ಇದೆಯೋ ಅದೇ ಮಾರ್ಗಸೂಚಿ ಮೈಸೂರಿಗೂ ಅನ್ವಯ. ಮೈಸೂರಿನಲ್ಲಿ ಸೋಂಕು ನಿಯಂತ್ರಣಕ್ಕೆ ತರಲು ಜಿಲ್ಲಾಡಳಿತ ಹಾಗೂ ಪಾಲಿಕೆ ಕ್ರಮ ವಹಿಸುತ್ತಿವೆ ಎಂದರು.
ಇದನ್ನೂ ಓದಿ: ಎಚ್ಚರಿಕೆ ಕಡೆಗಣಿಸಿದ ಸರ್ಕಾರ ಯಾವ ಸಭೆ ನಡೆಸಿ ಏನು ಉಪಯೋಗ?: ಹೆಚ್ಡಿಕೆ
ಮೈಸೂರಿನಲ್ಲಿ ಕ್ಲಬ್ಗಳ ಹಾವಳಿ ಹೆಚ್ಚಾಗಿದೆ. ಇದರ ನಿಯಂತ್ರಣಕ್ಕೆ ಪೊಲೀಸ್ ಆಯುಕ್ತರ ಜೊತೆ ಸಭೆ ಮಾಡಿದ್ದು, ನಿಯಂತ್ರಣಕ್ಕೆ ತರಲು ಸೂಚಿಸಿದ್ದೇನೆ ಎಂದು ತಿಳಿಸಿದರು.
ಗ್ರಂಥಾಲಯಕ್ಕೆ ಬೆಂಕಿ ಇಟ್ಟ ಪ್ರಕರಣ: ಈ ಬಗ್ಗೆ ತನಿಖೆ ಮಾಡಿ ಕಿಡಿಗೇಡಿಗಳನ್ನು ಬಂಧಿಸಲು ಸೂಚಿಸಿದ್ದೇನೆ. ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗಬೇಕು. ಈ ವಿಚಾರವಾಗಿ ಪೊಲೀಸ್ ಆಯುಕ್ತರ ಬಳಿ ಮಾಹಿತಿ ಪಡೆದಿದ್ದೇನೆ. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದೇನೆ ಎಂದರು.