ಮೈಸೂರು: ಮಳೆ ನೀರು ಕೊಯ್ಲಿನ ಮೂಲಕ ಇಡೀ ಗ್ರಾಮವೇ ಕುಡಿವ ನೀರಿನ ಸಮಸ್ಯೆ ಬಗೆಹರಿಸಿಕೊಂಡ ಗಂಡೆತ್ತೂರು ಗ್ರಾಮದ ಯಶೋಗಾಥೆ ಇದು.
ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಗಡಿ ಭಾಗದಲ್ಲಿರುವ ಈ ಗ್ರಾಮವೇ ಗಂಡೆತ್ತೂರು. ಈ ಗ್ರಾಮದಲ್ಲಿ 280ಕ್ಕೂ ಹೆಚ್ಚು ಮನೆಗಳಿವೆ. ಇಲ್ಲಿ ಜೂನ್ನಿಂದ ನವೆಂಬರ್ ವರೆಗೆ ಹೆಚ್ಚು ಮಳೆ ಬೀಳುತ್ತದೆ. ಆದರೂ ಕುಡಿವ ಶುದ್ಧ ನೀರಿಗೆ ಸಮಸ್ಯೆ ಇದೆ. ಇಲ್ಲಿನ ಕೊಳವೆ ಬಾವಿ, ಹೊಳೆಯಲ್ಲಿಯೂ ಕಲುಷಿತ ನೀರು ಬರುತ್ತದೆ. ಆದ್ದರಿಂದ ಇದಕ್ಕೆ ಗ್ರಾಮಸ್ಥರು ಕಂಡುಕೊಂಡ ಪರಿಹಾರವೇ ಮಳೆ ನೀರು ಕೊಯ್ಲು ಯೋಜನೆ ಪ್ರಯೋಜನ.
ಬಳಕೆ ಹೇಗೆ?: ಗ್ರಾಮದ ಹಲವಾರು ಮಂದಿ ಮಳೆ ನೀರು ಕೊಯ್ಲನ್ನು ಅವಲಂಬಿಸಿದ್ದಾರೆ. 2004 ರಲ್ಲಿ ಈ ಗ್ರಾಮದ ಸುಮಾರು 80% ಜನ ಪಂಚಾಯಿತಿ ಮತ್ತು ರಾಜ್ಯ ಸರ್ಕಾರದ ಅನುದಾನದೊಂದಿಗೆ ಪ್ರತಿ ಮನೆಯಲ್ಲೂ ಸುಮಾರು 30,000 ರೂ. ಖರ್ಚು ಮಾಡಿ ಮಳೆ ನೀರು ಕೊಯ್ಲು ಅಳವಡಿಸಿಕೊಂಡರು. ಆ ಮೂಲಕ ಆರು ತಿಂಗಳ ಕಾಲ ಸುರಿದ ಮಳೆ ನೀರನ್ನು ಪಕ್ಕದ ಟ್ಯಾಂಕ್ ನಲ್ಲಿ ಸಂಗ್ರಹ ಮಾಡಿಕೊಂಡರು. ನಂತರ ಮರಳು ಮತ್ತು ಕಲ್ಲುಗಳನ್ನು ಬಳಸಿ ನೀರನ್ನು ಶುದ್ಧೀಕರಿಸಿ, ಕುಡಿಯಲು ಹಾಗೂ ಇತರ ಅಗತ್ಯಗಳಿಗೆ ಬಳಿಸಿ ಕೊಳ್ಳುತ್ತಿದ್ದಾರೆ. ಆ ಮೂಲಕ ಮಳೆ ನೀರನ್ನು ಹೀಗೂ ಬಳಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಇಲ್ಲಿನ ಜನ.