ಅಮೆರಿಕ: 'ವಿಶ್ವದಲ್ಲೇ ಅತಿ ದೊಡ್ಡ ಎದೆಹಾಲು ದಾನಿ' ಎಂಬ ಹೆಗ್ಗಳಿಕೆ ಹೊಂದಿರುವ ಅಮೆರಿಕದ ಟೆಕ್ಸಾಸ್‌ನ ನಿವಾಸಿ ಅಲಿಸ್ಸಾ ಒಗ್ಲೆಟ್ರೀ, ಇದೀಗ ತಮ್ಮದೇ ಹಳೆಯ ದಾಖಲೆಯನ್ನು ಮುರಿದಿದ್ದಾರೆ. ಇವರು 2,645.58 ಲೀಟರ್ ಎದೆಹಾಲನ್ನು ಅಗತ್ಯವಿರುವವರಿಗೆ ನೀಡಿ ಮಾನವೀಯತೆ ಮರೆದಿದ್ದಾರೆ. ಗಿನ್ನೆಸ್ ವಿಶ್ವದಾಖಲೆ ವೆಬ್‌ಸೈಟ್ ನೀಡಿದ ಮಾಹಿತಿಯಂತೆ, ಒಗ್ಲೆಟ್ರಿ (36) ಅವರು ಈ ಹಿಂದೆ 2014ರಲ್ಲಿ 1,569.79 ಲೀಟರ್ ಎದೆಹಾಲು ದಾನ ಮಾಡಿ ದಾಖಲೆ ಬರೆದಿದ್ದರು. ಇದೀಗ ಈ ದಾಖಲೆಯನ್ನು ತಾವೇ ಮುರಿದಿದ್ದಾರೆ.
ಉತ್ತರ ಟೆಕ್ಸಾಸ್‌ನ ಮದರ್ಸ್ ಮಿಲ್ಕ್ ಬ್ಯಾಂಕ್ ಪ್ರಕಾರ, ಒಂದು ಲೀಟರ್ ಎದೆಹಾಲು 11 ಸಮಯಕ್ಕೂ ಮುನ್ನವೇ ಹುಟ್ಟಿದ ಮಕ್ಕಳ ಬದುಕಿಗೆ ಆಸರೆಯಾಗಬಲ್ಲದು. ಈ ಲೆಕ್ಕಾಚಾರದಂತೆ, ಈ ಮಹಿಳೆಯ ದಾನದಿಂದಾಗಿ 3,50,000 ಮಕ್ಕಳಿಗೆ ಅನುಕೂಲವಾಗಿದೆ.
Big-hearted mom donates record levels of breastmilk to help over 350,000 premature babies 🥰️https://t.co/4uVJibAxAV
— Guinness World Records (@GWR) November 6, 2024
"ನನ್ನಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಪದೇ ಪದೇ ಹಣ ನೀಡಿ ಸಹಾಯ ಮಾಡಲು ಅಷ್ಟೊಂದು ಹಣವಿಲ್ಲ. ನಾನು ನನ್ನ ಕುಟುಂಬವನ್ನು ಸಲಹಬೇಕಿದೆ. ಆದರೆ, ಎದೆಹಾಲನ್ನು ದಾನ ಮಾಡುವ ಮೂಲಕ ಉಪಕಾರ ಕೊಡಬಲ್ಲೆ" ಎಂದು ಇತ್ತೀಚಿನ ಅವರ ಸಂದರ್ಶನವನ್ನು ಗಿನ್ನೆಸ್ ವಿಶ್ವದಾಖಲೆ ವೆಬ್‌ಸೆಟ್ ಪ್ರಕಟಿಸಿದೆ.
ಒಗ್ಲೆಟ್ರಿ ಅವರಿಗೆ ನಾಲ್ವರು ಮಕ್ಕಳಿದ್ದಾರೆ. ತಮ್ಮ ಮಕ್ಕಳು ಎದೆಹಾಲು ಕುಡಿಯುವುದನ್ನು ನಿಲ್ಲಿಸಿದ ಬಳಿಕ ಅವರು ಎದೆಹಾಲು ದಾನ ಮಾಡುವುದನ್ನು ಮುಂದುವರೆಸಿದ್ದಾರೆ. ನಾನು 350,000 ಮಕ್ಕಳಿಗೆ ನಾನು ಎದೆಹಾಲು ನೀಡಿ ಸಹಾಯ ಮಾಡಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು.
"ನಾನು ಪ್ರತಿ 3 ಗಂಟೆಗೊಮ್ಮೆ ಎದೆಹಾಲು ಪಂಪ್ ಮಾಡುತ್ತೇನೆ. 15-30 ನಿಮಿಷಗಳ ಕಾಲ ಮಧ್ಯರಾತ್ರಿಯ ಬಳಿಕವೂ ಪಂಪ್ ಮಾಡುತ್ತೇನೆ. ಹೀಗೆ ಪಂಪ್ ಮಾಡಿದ ಬಳಿಕ ನನ್ನ ಫ್ರೀಜರ್ ತಂಬುವವರೆಗೂ ಎದೆಹಾಲನ್ನು ಹೆಪ್ಪುಗಟ್ಟಿಸುತ್ತೇನೆ. ನಂತರ ಅದನ್ನು ಮಿಲ್ಕ್ ಬ್ಯಾಂಕ್‌ಗೆ ಕೊಂಡೊಯ್ಯುತ್ತೇನೆ. ಅಲ್ಲಿ ಅವರು ವಿಶೇಷ ಮಾಪನದಲ್ಲಿ ಎದೆಹಾಲಿನ ಲೆಕ್ಕ ಹಾಕುತ್ತಾರೆ" ಎಂದು ಒಗ್ಲೆಟ್ರಿ ಹೇಳಿದರು.
ಒಗ್ಲೆಟ್ರೀ ಅವರಿಗೆ ಹೆಚ್ಚುವರಿಯಾಗಿ ಹಾಲು ಉತ್ಪಾದನೆಯಾಗುವ ಕುರಿತು ಯಾವುದೇ ವೈದ್ಯಕೀಯ ಸಮಸ್ಯೆಗಳಿಲ್ಲ. ಇದಕ್ಕೆಂದು ಅವರು ತಪಾಸಣೆ, ಚಿಕಿತ್ಸೆಗೂ ಒಳಗಾಗಿಲ್ಲ. ಸಂಪೂರ್ಣವಾಗಿ ಆರೋಗ್ಯವಂತ ಮಹಿಳೆಯಾಗಿದ್ದಾರೆ.
ಈ ಕುರಿತು ಮಾತನಾಡುತ್ತಾ, "ನಾನು ಹೆಚ್ಚು ನೀರು ಕುಡಿಯುತ್ತೇನೆ. ನನ್ನ ಪಂಪಿಂಗ್ ವೇಳಾಪಟ್ಟಿಯನ್ನು ಸರಿಯಾಗಿ ಅನುಸರಿಸುತ್ತಿದ್ದೇನೆ. ಉತ್ತಮ ಆಹಾರ ಸೇವಿಸುತ್ತೇನೆ. ಕಠಿಣ ಪರಿಶ್ರಮದಿಂದ ಹಾಲು ಪಂಪ್ ಮಾಡುತ್ತಿದ್ದೇನೆ. ನನ್ನಿಂದ ಅನೇಕ ಮಕ್ಕಳಿಗೆ ಸಹಾಯವಾಗುತ್ತಿದೆ ಎನ್ನುವುದೇ ನನ್ನೀ ಕೆಲಸಕ್ಕೆ ಪ್ರೇರಣೆ" ಎಂದು ಅವರು ಹೇಳಿದರು.
ಎದೆಹಾಲು ದಾನ ಮಾಡುವ ಕುರಿತು ಜಾಗತಿಕವಾಗಿ ಜಾಗೃತಿ ಮೂಡಿಸುವುದು ಒಗ್ಗೆಟ್ರಿ ಉದ್ದೇಶ. ತಮ್ಮಂತೆಯೇ ಇತರ ಮಹಿಳೆಯರೂ ಕೂಡಾ ಇತರ ತಾಯಂದಿರು ಮತ್ತು ಅವರ ಶಿಶುಗಳಿಗೆ ಸಹಾಯ ಮಾಡುವ ಸ್ಥಿತಿಯಲ್ಲಿರಬಹುದು ಎಂಬುದು ಅನೇಕರಿಗೆ ತಿಳಿದಿರುವುದಿಲ್ಲ. ನನ್ನ ಕೆಲಸ ಅಂಥವರಿಗೆ ಪ್ರೇರಣೆಯಾಗಲಿ ಎನ್ನುತ್ತಾರೆ ಒಗ್ಲೆಟ್ರೀ.
ಇದನ್ನೂ ಓದಿ: ಕಳೆದ 5 ವರ್ಷದಲ್ಲಿ 10,000 ಮಕ್ಕಳಿಗೆ ಎದೆ ಹಾಲು ನೀಡಿದ ಆಸ್ಪತ್ರೆ - Sion Hospitals breastmilk bank