ಮೈಸೂರು: ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದರೆ ಕಬಿನಿ ಹಿನ್ನೀರು ಪ್ರದೇಶದಿಂದ ರೈಲ್ವೆ ಸುರಂಗ ಮಾರ್ಗ ನಿರ್ಮಾಣವಾಗಲಿದೆ. ಇದರಿಂದ ಕೇರಳ-ಕರ್ನಾಟಕ ಪ್ರವಾಸೋದ್ಯಮ ಮತ್ತಷ್ಟು ಅಭಿವೃದ್ಧಿಯಾಗುವ ಜೊತೆಗೆ ಆರ್ಥಿಕ ಚಟುವಟಿಕೆ ಚುರುಕುಗೊಳ್ಳಲಿದೆ.
ಮೈಸೂರು-ಮಲಬಾರ್ ಹೊಸ ರೈಲು ಮಾರ್ಗಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿದ್ದು, 22 ಕಿ.ಮೀ. ಸುರಂಗ ಮಾರ್ಗವನ್ನೊಳಗೊಂಡ ರೈಲು ಮಾರ್ಗದ ನೀಲನಕ್ಷೆಯನ್ನು ಮಲಬಾರ್-ಮೈಸೂರು ರೋಡ್ ರೈಲ್ವೆ ಅಭಿವೃದ್ಧಿ ಸಮಿತಿಯ ಕೇರಳ ರಾಜ್ಯ ಸಮಿತಿ ಸಂಯೋಜಕ ಉಮೇಶ್ ಪೊಚ್ಚಪ್ಪನ್, ಕರ್ನಾಟಕ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದಾರೆ.
ಇದನ್ನೂ ಓದಿ : ದಾವಣಗೆರೆ ಸ್ಮಾರ್ಟ್ ಆದರೂ ಅಶೋಕ ರೈಲ್ವೆ ಗೇಟ್ಗಿಲ್ಲ ಅದರ ಭಾಗ್ಯ..
ಕೇರಳ ಮತ್ತು ಕರ್ನಾಟಕ ಎರಡು ರಾಜ್ಯಗಳ ಉದ್ಯೋಗಿಗಳಿಗೆ, ರೈತರಿಗೆ ಮತ್ತು ಕೂಲಿ ಕಾರ್ಮಿಕರಿಗೆ ಇದರಿಂದ ಅನುಕೂಲವಾಗಲಿದೆ. ಅಲ್ಲದೆ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ಸಿಗಲಿದೆ. 11 ಸಾವಿರ ಕೋಟಿ ರೂ. ವೆಚ್ಚದಲ್ಲಿ ಈ ಸುರಂಗ ಮಾರ್ಗ ನಿರ್ಮಾಣವಾಗಲಿದ್ದು, ಕಬಿನಿ ಜಲಾಶಯದ ಹಿನ್ನೀರಿನ ಪ್ರದೇಶಕ್ಕೆ ಯಾವುದೇ ತೊಂದರೆಯಾಗದಂತೆ ಹೆಲಿಕಾಪ್ಟರ್ ಸರ್ವೆ ಕೂಡ ಮಾಡಿಸಲಾಗಿದೆ.
ಮೈಸೂರಿನಿಂದ ಕೇರಳದ ತಲಶ್ಶೇರಿವರೆಗಿನ ನೂತನ ರೈಲು ಮಾರ್ಗವು, ಹೆಚ್.ಡಿ.ಕೋಟೆ ತಾಲೂಕಿನ ಅಂತರಸಂತೆ ಬಳಿಯಿಂದ ತಾಲೂಕಿನ ಗಡಿ ಭಾಗವಾದ ಬಾವಲಿ ಗ್ರಾಮದವರೆಗೆ 22 ಕಿ.ಮೀ. ಸುರಂಗ ಮಾರ್ಗವನ್ನು ಒಳಗೊಂಡಿದೆ. ಇದರಿಂದ ಕಾಡು ಪ್ರಾಣಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ. ರೈಲು ಸುರಂಗ ಮಾರ್ಗ ನಿರ್ಮಾಣಕ್ಕೆ ಎರಡು ರಾಜ್ಯಗಳ ಮುಖಂಡರು ಕೈ ಜೋಡಿಸಿ ಎಂದು ಮಲಬಾರ್-ಮೈಸೂರು ರೋಡ್ ರೈಲ್ವೆ ಅಭಿವೃದ್ಧಿ ಸಮಿತಿಯ ಕೇರಳ ರಾಜ್ಯ ಸಮಿತಿ ಮನವಿ ಮಾಡಿದೆ.