ಮೈಸೂರು : ಆರ್ಎಸ್ಎಸ್ ಅಂದರೆ ರಾಷ್ಟ್ರೀಯ ಸ್ವಯಂ ಸಂಘ ಸೇವಕ ಅಂತ ಜನ ಭಾವಿಸಿದ್ದಾರೆ. ಆದರೆ, ಅದು ರಾಷ್ಟ್ರೀಯ ಸುಳ್ಳುಗಾರರ ಸಂಘ ಎಂದು ಮಾಜಿ ಸಂಸದ ಆರ್. ಧ್ರುವನಾರಾಯಣ ಆರೋಪಿಸಿದ್ದಾರೆ.
ಜಲದರ್ಶಿನಿ ಸರ್ಕಾರಿ ಅತಿಥಿಗೃಹದಲ್ಲಿ ಮಾತನಾಡಿದ ಅವರು, ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿಯಾಗಿರುವ ಸಂತೋಷ್ ಅವರು, 'ಕರ್ನಾಟಕ ಜನಸ್ಪಂದನ' ಕಾರ್ಯಕ್ರಮದಲ್ಲಿ ನಮ್ಮ ಪಕ್ಷದ ಬಗ್ಗೆ ಸಾಕಷ್ಟು ಆರೋಪ ಮಾಡಿದ್ದಾರೆ. ಅವರು ಚುನಾಯಿತ ಜನಪ್ರತಿನಿಧಿಯಾಗಿ ರಾಜಕೀಯಕ್ಕೆ ಬಂದಿದ್ದರೆ ಗೊತ್ತಾಗುತ್ತಿತ್ತು. ಸುಳ್ಳು ಹೇಳಿ ರಾಜಕೀಯಕ್ಕೆ ಬಂದಿದ್ದಾರೆ. ಸುಳ್ಳನ್ನೇ ನಿಜ ಅಂತ ಸಾಬೀತು ಪಡಿಸಲು ಹೋಗುತ್ತಿದ್ದಾರೆ ಎಂದು ಕಿಡಿಕಾರಿದರು.
ಮೋದಿ ಸರ್ಕಾರದಲ್ಲಿ ಬಡತನ, ನಿರುದ್ಯೋಗ ಹೆಚ್ಚಾಗಿ, ಕಾನೂನು ಸುವ್ಯವಸ್ಥೆ ಕುಸಿಯುತ್ತಿದೆ. ಇದರ ಬಗ್ಗೆ ಜನರಿಗೆ ಸಂತೋಷ್ ಅವರು ಮನವರಿಕೆ ಮಾಡಿಕೊಡಬೇಕು. ಮೋದಿ ದೇಶವನ್ನು ಆತ್ಮನಿರ್ಭರ್ ಮಾಡ್ತಿವಿ ಅಂತಾರೆ, ಆದರೆ ಆತ್ಮಹತ್ಯೆ ದೇಶ ಮಾಡುತ್ತಿದ್ದಾರೆ ಎಂದು ಕುಟುಕಿದರು.
ಉದ್ಯೋಗ ಖಾತ್ರಿ ಹಾಗೂ ಆಹಾರ ಭದ್ರತೆ ಕಾಯ್ದೆಯನ್ನು ಯುಪಿಎ ಸರ್ಕಾರ ಜಾರಿಗೆ ತರದೇ ಇದ್ದಿದ್ದರೆ, ಕೊರೊನಾ ಸಮಯದಲ್ಲಿ ಎನ್ಡಿಎ ಸರ್ಕಾರ ದೇಶ ನಿಭಾಯಿಸಲು ಆಗುತ್ತಿರಲಿಲ್ಲ ಎಂದರು.
ವಿಶ್ವನಾಥ್ಗೆ ಗುದ್ದು: ಎಚ್. ವಿಶ್ವನಾಥ್ ಅವರು ಮೋದಿ ಅವರನ್ನ ಅಹಿಂದ ನಾಯಕ ಅಂತಾರೆ, ಹಿಂದುಳಿದ ವರ್ಗಗಳ ಅನುಕೂಲಕ್ಕಾಗಿ ಮಂಡಲ್ ಸಮಿತಿ ಬಿಲ್ ಪಾಸ್ ಮಾಡಿದಾಗ, ಬಿಜೆಪಿ ಹಾಗೂ ಎಬಿಪಿವಿ ರಾಷ್ಟ್ರ ವ್ಯಾಪಿ ಪ್ರತಿಭಟನೆ ಮಾಡಿದರು. ಆಗ ಮೋದಿ ಅವರು ಎಲ್ಲಿ ಹೋಗಿದ್ದರು? ವಿಶ್ವನಾಥ್ ಅವರಿಗೆ ಬಿಜೆಪಿಯಲ್ಲಿ ಸರಿಯಾಗಿ ನೋಡಿಕೊಂಡಿಲ್ಲ. ಅದಕ್ಕೆ ದ್ವಂದ್ವ ಹೇಳಿಕೆ ಕೊಡುತ್ತಿದ್ದಾರೆ ಎಂದರು.