ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ನೂತನ ಕುಲಪತಿಯಾಗಿ ಎನ್.ಕೆ. ಲೋಕನಾಥ್ ಅವರನ್ನು ನೇಮಕಗೊಳಿಸಿ , ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಯೋಜನಾ ಮತ್ತು ಮೇಲ್ವಿಚಾರಣಾ ಮತ್ತು ವೌಲ್ಯಮಾಪನ ಮಂಡಳಿಯ ನಿರ್ದೇಶಕರಾಗಿದ್ದ ಪ್ರೊ. ಎನ್.ಕೆ. ಲೋಕನಾಥ್ ಅವರನ್ನು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಯಾಗಿ ನೇಮಕ ಮಾಡಿ ರಾಜ್ಯಪಾಲ ಥಾವರ್ ಚಂದ್ ಗೇಹ್ಲೋಟ್ ಅವರು ಆದೇಶ ಹೊರಡಿಸಿದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ ಹೇಮಂತ ಕುಮಾರ್ ಅವರ ಅಧಿಕಾರಾವಧಿ 2022ರ ನವೆಂಬರ್ 15ರಂದು ಮುಕ್ತಾಯಗೊಂಡಿತ್ತು. ನಂತರ ಮೈಸೂರು ವಿಶ್ವವಿದ್ಯಾನಿಲಯದ ವಾಣಿಜ್ಯ ವಿಭಾಗದ ಡೀನ್ ಪ್ರೊ. ಎಚ್. ರಾಜಶೇಖರ್ ಪ್ರಭಾರ ಕುಲಪತಿಯಾಗಿ ಸೇವೆ ಸಲ್ಲಿಸಿದ್ದರು. ನಂತರ ಮೈಸೂರು ವಿವಿಯ ರಾಜ್ಯಶಾಸ್ತ್ರ ವಿಭಾಗದ ಡೀನ್ ಮುಜಾರ್ ಎಚ್ ಅಸ್ಸಾದಿ ಅವರು ಪ್ರಭಾರ ಕುಲಪತಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರಸ್ತುತ ಮೈಸೂರು ವಿವಿ ಕುಲಪತಿಯಾಗಿ ಎನ್.ಕೆ. ಲೋಕನಾಥ್ ನೇಮಕಗೊಂಡಿದ್ದಾರೆ.
7 ಜನ ಹೊಸ ವಿವಿಗಳಿಗೆ ಕುಲಪತಿಗಳನ್ನು ನೇಮಿಸಿ ಆದೇಶ: ರಾಜ್ಯ ಸರ್ಕಾರವು ನೂತನವಾಗಿ ಸ್ಥಾಪಿಸಿರುವ ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಡಗು, ಕೊಪ್ಪಳ ಮತ್ತು ಬಾಗಲಕೋಟೆ ವಿಶ್ವವಿದ್ಯಾಲಯಗಳಿಗೆ ಚೊಚ್ಚಲ ಕುಲಪತಿಗಳನ್ನು ನೇಮಿಸಿ, ಸೋಮವಾರ ಆದೇಶ ಹೊರಡಿಸಿತ್ತು. ಈ ಕುರಿತು ಎಂದು ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಸಿ. ಎನ್. ಅಶ್ವತ್ಥನಾರಾಯಣ ಮಾಹಿತಿ ನೀಡಿದ್ದರು.
ಯಾವ ವಿವಿಗೆ ಯಾರು ಕುಲಪತಿ.. ಬೆಂಗಳೂರು ವಿವಿ ಪತ್ರಿಕೋದ್ಯಮ ವಿಭಾಗದ ಡಾ. ಬಿ ಕೆ ರವಿ ಅವರನ್ನು ಕೊಪ್ಪಳ ವಿವಿಗೆ, ಬಾಗಲಕೋಟೆಯ ತೋಟಗಾರಿಕೆ ವಿವಿಯ ಡಾ. ಅಶೋಕ್ ಸಂಗಪ್ಪ ಆಲೂರು ಅವರನ್ನು ಕೊಡಗು ವಿವಿಗೆ, ಮೈಸೂರು ವಿವಿ ಮಾನವಶಾಸ್ತ್ರ ವಿಭಾಗದ ಡಾ. ಎಂ.ಆರ್. ಗಂಗಾಧರ ಅವರನ್ನು ಚಾಮರಾಜನಗರ ವಿವಿಗೆ, ಬೆಳಗಾವಿಯ ಕೆ.ಎಸ್. ಗೋಗಟೆ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಆನಂದ್ ಶರದ್ ದೇಶಪಾಂಡೆ ಅವರನ್ನು ಬಾಗಲಕೋಟೆ ವಿವಿಗೆ ಕುಲಪತಿಗಳಾಗಿ ನೇಮಕ ಮಾಡಲಾಗಿದೆ.
ಕುವೆಂಪು ವಿವಿಯ ಡಾ. ಬಿ ಎಸ್ ಬಿರಾದಾರ್ ಅವರನ್ನು ಬೀದರ್ ವಿವಿಗೆ, ಬಾಗಲಕೋಟೆಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಡಾ. ಸುರೇಶ್ ಎಚ್. ಜಂಗಮಶೆಟ್ಟಿ ಅವರನ್ನು ಹಾವೇರಿ ವಿವಿಗೆ ಮತ್ತು ಧಾರವಾಡದ ಕರ್ನಾಟಕ ವಿವಿಯ ನಿವೃತ್ತ ಪ್ರೊಫೆಸರ್ ಆಗಿರುವ ಡಾ. ಟಿ.ಸಿ. ತಾರಾನಾಥ್ ಅವರನ್ನು ಹಾಸನ ವಿಶ್ವವಿದ್ಯಾಲಯದ ಕುಲಪತಿಗಳಾಗಿ ನೇಮಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದರು.
ಗಂಗಮ್ಮ ಬೊಮ್ಮಾಯಿ ಜಾನಪದ ವಸ್ತು ಸಂಗ್ರಹಾಲಯ: ಮನುಷ್ಯ ಪರಿಪೂರ್ಣ ಬೆಳವಣಿಗೆ ಹೊಂದಬೇಕಾದರೆ, ಅದು ಜಾನಪದದಿಂದ ಮಾತ್ರ ಸಾಧ್ಯ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅಭಿಪ್ರಾಯ ವ್ಯಕ್ತಪಡಿಸಿದರು.
ಬುಧವಾರ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಗೋಟಗೊಡಿಯಲ್ಲಿರುವ ಜಾನಪದ ವಿವಿಯಲ್ಲಿ ಶ್ರೀಮತಿ ಗಂಗಮ್ಮ ಬೊಮ್ಮಾಯಿ ಜಾನಪದ ವಸ್ತು ಸಂಗ್ರಹಾಲಯದ ಶಂಕು ಸ್ಥಾಪನೆ ಹಾಗೂ ಡಾ ಬಿ ಅರ್ ಅಂಬೇಡ್ಕರ್ ಕಲಾಭವನ ಉದ್ಘಾಟನೆ ಮಾಡಿ ಅವರು ಮಾತನಾಡಿದ್ದರು. ಬರುವ ದಿನಗಳಲ್ಲಿ ಯಾವುದೇ ದೇಶ ವಿದೇಶದ ಜಾನಪದದ ವಿಷಯದ ಮಾಹಿತಿ ಇಲ್ಲಿ ಸಿಗುವಂತಾಗಬೇಕು ಅನ್ನುವ ಉದ್ದೇಶದಿಂದ ಗೋಟಗೊಡಿಯಲ್ಲಿ ಜಾನಪದ ವಿವಿ ಮಾಡಲಾಗಿದೆ ಎಂದು ಸಿಎಂ ಬೊಮ್ಮಾಯಿ ಆಶಯ ವ್ಯಕ್ತಪಡಿಸಿದ್ದರು.
ಇದನ್ನೂಓದಿ:ಮಾ 25ಕ್ಕೆ ದಾವಣಗೆರೆಯಲ್ಲಿ ಪ್ರಧಾನಿ ಮೋದಿ ಮೇನಿಯಾ; ಸಮಾವೇಶದಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?