ಮೈಸೂರು: ವಾಣಿಜ್ಯ ಕಟ್ಟಡ ಮಾಲೀಕರಿಗೆ ಹಾಗೂ ನಿವೇಶನದಾರರಿಗೆ ತೊಂದರೆ ನೀಡುತ್ತಿಲ್ಲವೆಂದು ನಗರ ಪಾಲಿಕೆಯ 65 ವಾರ್ಡ್ಗಳ ಸದಸ್ಯರು ಸಾರ್ವಜನಿಕವಾಗಿ ಬಹಿರಂಗಪಡಿಸಲಿ ಎಂದು ಸಂಸದ ಪ್ರತಾಪ್ ಸಿಂಹ ಸವಾಲು ಹಾಕಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರು ಮಹಾನಗರ ಪಾಲಿಕೆಯಲ್ಲಿ ಸಹಾಯವಾಣಿ ಕೇಂದ್ರ ತೆರೆದರೆ ಸ್ವೀಕರಿಸಲಾಗದಷ್ಟು ಕರೆಗಳು ಬರುತ್ತವೆ. ಹಾಗೇ ನಗರ ಪಾಲಿಕೆಯ ಸದಸ್ಯರು ವಾಣಿಜ್ಯ ಕಟ್ಟಡ ಹಾಗೂ ನಿವೇಶನ ಮಾಲೀಕರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ದೂರಿದರು.
ಮೇಯರ್ ಹಾಗೂ ವರ್ಕ್ ಕಮಿಟಿ ಸದಸ್ಯರು ನಗರ ಪಾಲಿಕೆ ನಗರ ಯೋಜನೆ ಅಧಿಕಾರಿಗೆ ಒತ್ತಡ ತಂದು ತೊಂದರೆ ನೀಡುತ್ತಿದ್ದಾರೆ. ಇವೆಲ್ಲ ನಿಲ್ಲಬೇಕು. ಯಾರಿಗಾದರೂ ತೊಂದರೆಯಾದರೆ ನಗರ ಆಯುಕ್ತರನ್ನ ಅಥವಾ ನನ್ನ ಕಚೇರಿ ಸಂಪರ್ಕಿಸಿ ಎಂದರು.
15 ವರ್ಷಗಳಿಂದ ವರ್ಕ್ ಕಮಿಟಿ ಅಧ್ಯಕ್ಷರಾಗಿರುವಂತಹ ಸದಸ್ಯರು ತಮ್ಮ ಆಸ್ತಿ ಘೋಷಣೆ ಮಾಡಿಕೊಳ್ಳಲಿ. ಒಂದೇ ಕೆಲಸಕ್ಕೆ ನಾಲ್ಕು ಬಾರಿ ಬಿಲ್ ಮಾಡ್ತಾರೆ. ಕಾಮಗಾರಿಗಳಿಗೆ ಜಿಪಿಎಸ್ ಮಾಡಿಸಿ ಅಂದರೆ ನಗರ ಪಾಲಿಕೆ ಸದಸ್ಯರು ಒಪ್ಪುವುದಿಲ್ಲವೆಂದು ಅಸಮಾಧಾನ ಹೊರ ಹಾಕಿದರು.