ಮೈಸೂರು: ಮಂಡ್ಯದಲ್ಲಿ 52 ದಿನಗಳಿಂದ ನಡೆಯುತ್ತಿದ್ದ ಶಾಂತಿಯುತ ರೈತರ ಪ್ರತಿಭಟನಾ ಸ್ಥಳಕ್ಕೆ ಪೋಲಿಸರು ಏಕಾಏಕಿ ರೈತರ ಮೇಲೆ ದೌರ್ಜನ್ಯ ಎಸಗಿರುವುದು ಖಂಡನೀಯ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ರೈತರ ಮೇಲಿನ ಹಲ್ಲೆ ಖಂಡಿಸಿದ್ದಾರೆ.
ಕಬ್ಬಿನ ಬೆಲೆ ನಿಗದಿಗೆ ಮತ್ತು ಹಾಲಿಗೆ ಉತ್ತಮ ಬೆಲೆ ನಿಗದಿಗಾಗಿ ಮಂಡ್ಯದಲ್ಲಿ 52 ದಿನಗಳಿಂದ ಶಾಂತಿಯುತ ಸತ್ಯಾಗ್ರಹ ನಡೆಯುತ್ತಿತ್ತು. ಆದರೆ ಬುಧವಾರದಂದು ಪೊಲೀಸರು ಏಕಾಏಕಿ ಬಂದು ಧರಣಿ ನಿರತರನ್ನ ಅರೆಸ್ಟ್ ಮಾಡಿದ್ದಾರೆ.
ಪ್ರತಿಭಟನೆಗೆ ನಿರ್ಮಿಸಿದ್ದ ಟೆಂಟ್ಗಳನ್ನ ಕಿತ್ತುಹಾಕಿದ್ದಾರೆ. ಫೋಟೊ ತೆಗೆಯುತ್ತಿದ್ದಂತ ಕಾರ್ಯಕರ್ತರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಇದು ಖಂಡನೀಯ ಇದನ್ನ ಪ್ರತಿಭಟಿಸಿ ಎಲ್ಲರೂ ಬಿದಿಗಿಳಿಯಬೇಕು.
ಮೈಸೂರು, ಚಾಮರಾಜನಗರ, ರಾಮನಗರ, ಕೊಡಗಿನ ಎಲ್ಲ ಪದಾಧಿಕಾರಿಗಳು ಮಂಡ್ಯದಲ್ಲಿ ಪೊಲೀಸ್ ಠಾಣೆ ಮುಂದೆ ಧರಣಿಯಲ್ಲಿ ಭಾಗವಹಿಸಬೇಕು. ಇದಕ್ಕೆ ದಲಿತ ಸಂಘಟನೆಗಳ ಮಿತ್ರರು, ಪ್ರಗತಿಪರ ಸಂಘಟನೆಗಳು ಇದರಲ್ಲಿ ಭಾಗವಹಿಸಬೇಕು ಎಂದು ಬಡಗಲಪುರ ನಾಗೇಂದ್ರರವರು ವಿನಂತಿಸಿಕೊಂಡಿದ್ದಾರೆ.
ಇದು ಪೊಲೀಸರ ಅತಿರೇಕದ ವರ್ತನೆ ಆಗಿದೆ. ಇದನ್ನ ತೀವ್ರವಾಗಿ ಕರ್ನಾಟಕದ ರಾಜ್ಯ ರೈತ ಸಂಘ ಖಂಡಿಸುತ್ತದೆ. ಇದೇನು ಪೊಲೀಸ್ ರಾಜ್ಯನಾ? ಪೊಲೀಸ್ ಅಧಿಕಾರಿಗಳು ಕ್ಷಮೆಯನ್ನು ಕೇಳಲೇ ಬೇಕು ಮತ್ತು ಅವರ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕು. ಧರಣಿ ನಡೆಸಲು ಅವಕಾಶ ಮಾಡಿಕೊಡಬೇಕು, ಇಲ್ಲ ಎಂದರೆ ನಾವು ರಾಜ್ಯಾದ್ಯಂತ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಬೆಂಬಲ ಬೆಲೆ ನೀಡುವಂತೆ ರೈತರ ಆಗ್ರಹ: ಮುಖ್ಯಮಂತ್ರಿ ಪ್ರತಿಮೆಗೆ ರಕ್ತಾಭಿಷೇಕ ಮಾಡಿ ಪ್ರತಿಭಟನೆ