ಮೈಸೂರು : ಪೊಲೀಸರು ದಕ್ಷತೆಯೊಂದಿಗೆ ಜನಸ್ನೇಹಿಯಾಗಿರಬೇಕು ಎಂದು ಪೊಲೀಸ್ ಇಲಾಖೆ ತರಬೇತಿ ಸಂಸ್ಥೆ ಮಹಾನಿರ್ದೇಶಕ ಪದಮ್ ಕುಮಾರ್ ಗಗ್೯ ಅವರು ಪ್ರಶಿಕ್ಷಣಾರ್ಥಿಗಳಿಗೆ ಕಿವಿಮಾತು ಹೇಳಿದರು.
ಮೈಸೂರಿನ ಕರ್ನಾಟಕ ಪೊಲೀಸ್ ಅಕಾಡೆಮಿ ಮೈದಾನದಲ್ಲಿ ನಡೆದ 44ನೇ ತಂಡದ ಆರಕ್ಷಕ ಉಪ ನಿರೀಕ್ಷಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದ ಗೌರವ ವಂದನೆ ಸ್ವೀಕರಿಸಿ ನಂತರ ಮಾತನಾಡಿದ ಅವರು, ಪೊಲೀಸ್ ಇಲಾಖೆಗೆ ಬರಲು ಸಾಕಷ್ಟು ಮಂದಿ ಪ್ರಯತ್ನಿಸುತ್ತಿದ್ದಾರೆ.
ಆದರೆ, ಯಾರು ಶ್ರಮವಹಿಸಿ ಓದುತ್ತಾರೆ ಅವರಿಗೆ ಕೆಲಸ ಸಿಗುತ್ತದೆ. ಸಿಕ್ಕಿರುವ ಅವಕಾಶ ಬಳಸಿಕೊಂಡು ಜನಸ್ನೇಹಿ ಪೊಲೀಸರಾಗಿ ಜನರೊಡನೆ ಬೆರೆಯಿರಿ ಎಂದು ಸಲಹೆ ನೀಡಿದರು. ತರಬೇತಿ ಸಂಸ್ಥೆ ಮಹಾನಿರೀಕ್ಷಕ ವಿಫುಲ್ ಕುಮಾರ್ ಅವರು ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದ ನಂತರ ಮಾತನಾಡಿ, ಕರ್ನಾಟಕ ಪೊಲೀಸ್ ಇಲಾಖೆಗೆ ತುಂಬ ಇತಿಹಾಸ ಹಾಗೂ ಮಹತ್ವವಿದೆ. ಇಲಾಖೆಯೊಂದಿಗೆ ಸೇರಿರುವ ನೀವು ಉತ್ತಮವಾಗಿ ಕಾರ್ಯನಿರ್ವಹಿಸಿ, ರಾಜ್ಯಕ್ಕೆ ಒಳ್ಳೆಯ ಹೆಸರು ತನ್ನಿ ಎಂದರು.
ಸರ್ವೋತ್ತಮ ಪ್ರಶಿಕ್ಷಣಾರ್ಥಿಗಳಾಗಿ ಪ್ರಥಮ ಸ್ಥಾನಗಳಿಸಿದ ಚಿಂತನ್ ಕೆ ಆರ್ ಮತ್ತು ಸಿ. ಉಮಾದೇವಿ ಅವರಿಗೆ ಇದೇ ಸಂದರ್ಭದಲ್ಲಿ ಪೊಲೀಸ್ ಮಹಾನಿರ್ದೇಶಕ ಪದಮ್ ಕುಮಾರ್ ಗರ್ಗ್ ಬಹುಮಾನ ವಿತರಣೆ ಮಾಡಿದರು.
ಪಥ ಸಂಚಲನ ಕಾರ್ಯಕ್ರಮದಲ್ಲಿ ಐಜಿಪಿ ಪವರ್ ಪ್ರವೀಣ್ ಮಧುಕರ್, ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಪೊಲೀಸ್ ಅಕಾಡೆಮಿಯ ಉಪನಿರ್ದೇಶಕಿ ಸುಮನ್ ಡಿ ಪನ್ನೇಕರ್, ಎಸ್ ಪಿ ರಿಷ್ಯಂತ್, ಡಿಸಿಪಿ ಪ್ರಕಾಶ್ ಗೌಡ ಸೇರಿ ಇನಿತರ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು.