ಮೈಸೂರು: ಸಂಸ್ಕೃತ ಭಾಷೆಯಲ್ಲಿ 50 ವರ್ಷಗಳಿಂದ ಪ್ರಕಟವಾಗುತ್ತಿರುವ ‘ಸುಧರ್ಮ’ ದಿನಪತ್ರಿಕೆಯ ಸಂಪಾದಕ ಕೆ.ವಿ. ಸಂಪತ್ ಕುಮಾರ್ ಹಾಗೂ ಅವರ ಶ್ರೀಮತಿ ಕೆ.ಎಸ್. ಜಯಲಕ್ಷ್ಮಿ ಅವರಿಗೆ ಈ ಸಾಲಿನ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಈ ಹಿನ್ನೆಲೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪರವಾಗಿ, ಸಹಾಯಕ ನಿರ್ದೇಶಕ ಆರ್. ರಾಜು ಅವರು ದಂಪತಿಯನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ದೇಶದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಯನ್ನು ,ಸಾಹಿತ್ಯ, ಶಿಕ್ಷಣ ಹಾಗೂ ಪತ್ರಿಕೋದ್ಯಮದಲ್ಲಿ ಸೇವೆ ಮಾಡುತ್ತಿರುವ ದಂಪತಿಗೆ ನೀಡಿರುವುದು ಅಪರೂಪದ ಸಂಗತಿ. ಭಾರತ ಸರ್ಕಾರ ನಿಮ್ಮ ಸೇವೆಯನ್ನು ಗುರುತಿಸಿ, ಈ ಪ್ರಶಸ್ತಿ ನೀಡುವುದು ನಿಜಕ್ಕೂ ಔಚಿತ್ಯಪೂರ್ಣವಾಗಿದೆ ಎಂದು ತಿಳಿಸಿದ್ದಾರೆ.
‘ಸುಧರ್ಮ’ ದಿನಪತ್ರಿಕೆಯು ವಿಶ್ವದಲ್ಲೇ ಸಂಸ್ಕೃತ ಭಾಷೆಯಲ್ಲಿ ಪ್ರಕಟವಾಗುವ ಏಕೈಕ ದಿನಪತ್ರಿಕೆ ಎಂಬ ಹೆಗ್ಗಳಿಗೆ ಪಾತ್ರವಾಗಿರುವುದು ಹೆಮ್ಮೆಯ ವಿಷಯ. ಈ ಪತ್ರಿಕೆ ಬೆಳವಣಿಗೆಗೆ ಹಾಗೂ ನಿರಂತರವಾಗಿ ಪ್ರಕಟವಾಗಲು ಬೇಕಾಗುವ ಪ್ರೋತ್ಸಾಹವನ್ನು ಒದಗಿಸಲು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಅಗತ್ಯ ನೆರವನ್ನು ನೀಡಲು ಸರ್ಕಾರದ ಕಾರ್ಯದರ್ಶಿಗಳಾದ ಕ್ಯಾಪ್ಟನ್ ಪಿ. ಮಣಿವಣ್ಣನ್ ಹಾಗೂ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನು ಸುಧರ್ಮ ಸಂಸ್ಕೃತ ದಿನಪತ್ರಿಕೆಗೆ ಸರ್ಕಾರದ ನೆರವು ಖಂಡಿತವಾಗಿಯು ಬೇಕಾಗಿದೆ. ಈ ಫೆಬ್ರವರಿಯ ಕೊನೆಯ ವಾರದಲ್ಲಿ ಪತ್ರಿಕೆಯ ಸುವರ್ಣ ಮಹೋತ್ಸವ ಆಚರಿಸುವ ಉದ್ದೇಶವಿದ್ದು, ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳುವ ಬಗ್ಗೆ ಆಲೋಚಿಸುತ್ತಿದ್ದೇವೆ ಎಂದು ಕೆ.ವಿ.ಸಂಪತ್ ಕುಮಾರ್ ತಿಳಿಸಿದ್ದಾರೆ.