ಮೈಸೂರು: ನಾಡಹಬ್ಬ ದಸರಾವನ್ನು ಕೊರೊನಾದಿಂದ ಸರಳವಾಗಿ ಆಚರಿಸಲಾಗುತ್ತಿದೆ. ಹೀಗಾಗಿ ಚಾಮುಂಡಿ ಬೆಟ್ಟದಲ್ಲಿ ನಡೆಯುವ ದಸರಾ ಮಹೋತ್ಸವ ಉದ್ಘಾಟನೆಗೆ 200 ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಕೊರೊನಾದಿಂದ ಈ ಬಾರಿ ನಾಡಹಬ್ಬ ದಸರಾವನ್ನು ಸರಳ ಹಾಗೂ ಸಾಂಪ್ರದಾಯಿಕವಾಗಿ ಆಚರಿಸಲು ಸರ್ಕಾರ ತೀರ್ಮಾನಿಸಿದ್ದು, ಚಾಮುಂಡಿ ಬೆಟ್ಟದಲ್ಲಿ ನಡೆಯುವ ದಸರಾ ಮಹೋತ್ಸವ ಉದ್ಘಾಟನಾ ಮಹೋತ್ಸವಕ್ಕೆ ಕೇವಲ 200 ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಮಾಧ್ಯಮದವರನ್ನು ಹೊರತುಪಡಿಸಿ ಉಳಿದವರಿಗೆ ಪ್ರವೇಶ ಇರದಂತೆ ನೋಡಿಕೊಳ್ಳಲು ಜಿಲ್ಲಾಡಳಿತ ನಿರ್ಧರಿಸಿದೆ.
ಜಿಲ್ಲಾಧಿಕಾರಿ ಶರತ್, ನಗರ ಪೋಲಿಸ್ ಆಯುಕ್ತ ಡಾ. ಚಂದ್ರಗುಪ್ತ, ಡಿಸಿಪಿ ಪ್ರಕಾಶ್ ಗೌಡ ಸೇರಿದಂತೆ ಅಧಿಕಾರಿಗಳು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆಸನದ ವ್ಯವಸ್ಥೆ...
ಚಾಮುಂಡಿ ಬೆಟ್ಟದ ದೇವಸ್ಥಾನದ ಪಕ್ಕದಲ್ಲೇ ವೇದಿಕೆ ನಿರ್ಮಿಸಿ 200 ಆಸನಗಳಿಗೆ ಮೀರದಂತೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗುತ್ತಿದೆ. ದಸರಾ ಉದ್ಘಾಟಕರು, ಮುಖ್ಯಮಂತ್ರಿಗಳು, ಸಚಿವರು, ಜನಪ್ರತಿನಿಧಿಗಳಿಗೆ ವೇದಿಕೆಯಲ್ಲಿ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.
ಸಾರ್ವಜನಿಕರಿಗೆ ಅಂದು ಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ಬಾರದಂತೆ ನಿರ್ಬಂಧ ವಿಧಿಸಲಾಗಿದ್ದು, ಭದ್ರತಾ ಕ್ರಮ, ವಾಹನ ನಿಲುಗಡೆ ಸೇರಿದಂತೆ ದಸರಾ ಉದ್ಘಾಟನೆಗೆ ಕೈಗೊಳ್ಳಬೇಕಾದ ಅಗತ್ಯ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಶರತ್ ಪೋಲಿಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.