ಮೈಸೂರು: ಎಚ್.ವಿಶ್ವನಾಥ್ ಮಂತ್ರಿಯಾಗಬಾರದು ಎಂದು 17 ಜನರಲ್ಲಿ ಒಬ್ಬ ಆಕಾಂಕ್ಷಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಈಗ ತೀರ್ಪು ಬಂದಿದೆ ಎಂದು ಹೇಳುವ ಮೂಲಕ ಮೈಸೂರಿನಲ್ಲಿ ಶಾಸಕ ಸಾ.ರಾ. ಮಹೇಶ್ ಹೊಸ ಬಾಂಬ್ ಸಿಡಿಸಿದ್ದಾರೆ.
ತಮ್ಮ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 'ನಾನು ವಿಶ್ವನಾಥ್ ವಿರುದ್ಧ ನ್ಯಾಯಾಲಯಕ್ಕೆ ಹೋಗುವುದಿಲ್ಲ. ಆದರೆ ಜನತಾ ನ್ಯಾಯಾಲಯಕ್ಕೆ ಹೋಗುತ್ತೇನೆ. 17 ಜನರೂ ಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದು, ವಿಶ್ವನಾಥ್‌ಗೆ ಸಚಿವ ಸ್ಥಾನ ಕೊಡಬಾರದು ಎಂದು ಒಬ್ಬರು ಅರ್ಜಿ ಸಲ್ಲಿಸಿದ್ದಾರೆ. ಅದರಂತೆ ನ್ಯಾಯಾಲಯದಲ್ಲಿ ತೀರ್ಪು ಬಂದಿದೆ. ಏನಾದರು ಅವರು ವಿಧಾನಪರಿಷತ್ ಸದಸ್ಯತ್ವವನ್ನು ಅನರ್ಹ ಮಾಡಬೇಕು ಎಂದು ಕೇಳಿದ್ದರೆ, ಅದೂ ಕೂಡ ಆಗುತ್ತಿತ್ತು' ಎಂದರು.
'ವಿಶ್ವನಾಥ್ ಪರಿಸ್ಥಿತಿ ಅಯ್ಯೋ ಅನ್ನಿಸುತ್ತಿದೆ'
'ಸುಪ್ರೀಂಕೋರ್ಟ್ ತೀರ್ಪಿನಲ್ಲಿ 15ನೇ ವಿಧಾನಸಭೆ ಮುಗಿಯುವವರೆಗೂ ಅಥವಾ ರಿ-ಎಲೆಕ್ಟ್ ಆಗುವವರೆಗೂ ಯಾವುದೇ ಸಂವಿಧಾನಿಕ ಹುದ್ದೆಯನ್ನು ನಾಮ ನಿರ್ದೇಶನ ಮಾಡಬಾರದು ಎಂಬ ಉಲ್ಲೇಖವಿದೆ. ಇವತ್ತಿನ ವಿಶ್ವನಾಥ್ ಸ್ಥಿತಿಯನ್ನು ನೋಡಿದರೆ ಅಯ್ಯೋ ಪಾಪ ಅನ್ನಿಸುತ್ತಿದೆ. ಅವರು ಕಳೆದ ವರ್ಷ ಚಾಮುಂಡಿ ಬೆಟ್ಟಕ್ಕೆ ಬಂದು ದೇವರ ದರ್ಶನ ಪಡೆಯದೆ ವಾಪಸ್ ಬಂದಿದ್ದರು. ಆದರೆ ಇಂದು ತೀರ್ಪು ನನಗೆ ನ್ಯಾಯ ದೊರಕಿಸಿದೆ. ದೇವರ ಮುಂದೆ ನ್ಯಾಯ ಸಿಕ್ಕಿದೆ' ಎಂದರು.
ಇದನ್ನು ಓದಿ: ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರುವೆ: ಎಚ್.ವಿಶ್ವನಾಥ್
'ಹುಣಸೂರಿನಲ್ಲಿ ಪಕ್ಷದ ನಾಯಕರು, ಕಾರ್ಯಕರ್ತರು ಹಗಲಿರುಳು ದುಡಿದು ಅಭ್ಯರ್ಥಿಯನ್ನು ಗೆಲ್ಲಿಸಿದರು. ಅಂತಹ ಗೆಲುವನ್ನು ಮರೆತು ಅವರು ಪಕ್ಷಕ್ಕೆ ದ್ರೋಹ ಮಾಡಿದ್ರು. ಈಗ ಅವರಿಗೆ ತಕ್ಕ ಶಿಕ್ಷೆಯಾಗಿದೆ' ಎಂದು ಹೇಳಿದರು.
ಸಿದ್ದರಾಮಯ್ಯಗೆ ತಿರುಗೇಟು:
ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ನಷ್ಟ ಆಯಿತು ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡುತ್ತಾ, 'ಮಂಡ್ಯದಲ್ಲಿ ಕಾಂಗ್ರೆಸ್ನವರು ಕಳೆದ ಸಂಸತ್ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಕೆಲಸ ಮಾಡಿದರು. ಆಗಲೇ ಇಬ್ಬರ ನಡುವೆ ಬಿರುಕು ಉಂಟಾಯಿತು. ಜೆಡಿಎಸ್ ಇಲ್ಲದೆ ಕಾಂಗ್ರೆಸ್ ಇಲ್ಲ ಎಂಬುದನ್ನು ಅವರು ಸದಾ ಅರ್ಥ ಮಾಡಿಕೊಳ್ಳಲಿ' ಎಂದರು.