ಮೈಸೂರು: ಸಿಎಂ ಬದಲಾವಣೆ ಆಗುತ್ತದೆ ಎಂದು ದೆಹಲಿಯೇ ಹೇಳುತ್ತಿದೆ. ದೆಹಲಿ ಹೈಕಮಾಂಡ್ ಏನು ಹೇಳುತ್ತಿದೆಯೋ ಅದನ್ನೇ ನಾವು ಹೇಳುತ್ತಿದ್ದೇವೆ. ಸಿಎಂ ಬದಲಾವಣೆ ಖಚಿತ ಎಂದು ಈಟಿವಿ ಭಾರತಕ್ಕೆ ನೀಡಿದ ಸಂದರ್ಶನದಲ್ಲಿ ಎಂಎಲ್ಸಿ ಹೆಚ್.ವಿಶ್ವನಾಥ್ ಹೇಳಿದ್ದಾರೆ.
ಎಲ್ಲಾ ಪಕ್ಷಗಳಲ್ಲೂ ಈ ಪ್ರಕ್ರಿಯೆಯಿದೆ
ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಆಡಿಯೋ ಹರಿಬಿಡಲಾಗಿದೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದು ಸಹಜ. ಎಲ್ಲ ರಾಜಕೀಯ ಪಕ್ಷಗಳಲ್ಲೂ ಈ ರೀತಿಯ ಪ್ರಕ್ರಿಯೆ ನಡೆಯುತ್ತಲೇ ಇರುತ್ತದೆ. ಬಿಜೆಪಿಯಲ್ಲಿಯೂ ಇದೆ ಅಷ್ಟೇ ಎಂದರು.
ಭವಿಷ್ಯಕ್ಕೆ ಒಳ್ಳೆಯದಾಗುವ ದೃಷ್ಟಿಯಿಂದ ಈ ಪ್ರಕ್ರಿಯೆ
ಇದು ಕರ್ನಾಟಕ ರಾಜ್ಯದ ಆಡಳಿತ, ಅಭಿವೃದ್ಧಿ ಹಾಗೂ ಭಾರತೀಯ ಜನತಾ ಪಾರ್ಟಿಯ ಮುಂದಿನ ಭವಿಷ್ಯಕ್ಕೆ ಒಳ್ಳೆಯದಾಗುವ ದೃಷ್ಟಿಯಿಂದ ಈ ಪ್ರಕ್ರಿಯೆ ನಡೆಯುತ್ತಿದೆ. ಯಡಿಯೂರಪ್ಪರಿಗೆ ಸಂಧ್ಯಾ ಕಾಲವಿದು. ಈ ಕಾಲದಲ್ಲಿ ಅವರು ಸಾರ್ವಜನಿಕವಾಗಿ ಹಾಗೂ ರಾಜಕೀಯವಾಗಿ ಗೌರವಯುತವಾಗಿ ವಿದಾಯ ಹೇಳಬೇಕು, ಅದನ್ನು ಹೊರತುಪಡಿಸಿ ಬೇರೇನೂ ಇಲ್ಲ. ಸಿಎಂ ಬದಲಾವಣೆ ಖಂಡಿತವಾಗಿ ಆಗೇ ಆಗುತ್ತದೆ ಎಂದರು.
ಪ್ರತ್ಯೇಕ ಸಭೆಯಿಂದ ಏನೂ ಆಗಲ್ಲ
ಕಾಂಗ್ರೆಸ್ನಿಂದ ಬಂದು ಬಿಜೆಪಿಯಲ್ಲಿ ಸಚಿವರಾದವರು ಇಂದು ಸಿಎಂ ಬದಲಾವಣೆ ವದಂತಿ ವಿಚಾರವಾಗಿ, ಪ್ರತ್ಯೇಕವಾಗಿ ಸಭೆ ನಡೆಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ವಿಶ್ವನಾಥ್, ಸಭೆಯಿಂದ ಏನು ಆಗುವುದಿಲ್ಲ. ಹೊರಗಿನಿಂದ ಬಂದವರು ಅಂತಾ ಏನು ಇಲ್ಲ. ಅವರು ಈಗ ಬಿಜೆಪಿಯಲ್ಲೇ ಇದ್ದಾರೆ ಎಂದು ಸ್ಪಷ್ಟಪಡಿಸಿದರು.
ನನ್ನ ಫೋನ್ ಕೂಡ ಟ್ಯಾಪಿಂಗ್ ಆಗಿತ್ತು
ಫೋನ್ ಟ್ಯಾಪಿಂಗ್ ಆಗುತ್ತಿದೆ ಎಂದು ಶಾಸಕ ಯತ್ನಾಳ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ವಿಶ್ವನಾಥ್, ಪೋನ್ ಟ್ಯಾಪಿಂಗ್ ಯಾವಾಗಲೂ ನಡೆಯುತ್ತಲೇ ಇರುತ್ತದೆ. ಕುಮಾರಸ್ವಾಮಿ ಸಿಎಂ ಆಗಿದ್ದಾಗ ನನ್ನನ್ನು ಸೇರಿ 700 ಜನರ ಪೋನ್ಗಳನ್ನು ಟ್ಯಾಪಿಂಗ್ ಮಾಡಲಾಗಿತ್ತು. ಆದರೆ ಏನು ಆಗಲಿಲ್ಲ. ಫೋನ್ ಟ್ಯಾಪಿಂಗ್ನಿಂದ ರಾಜಕೀಯದಲ್ಲಿ ಏನು ಮಾಡಲು ಸಾಧ್ಯವಿಲ್ಲ. ರಾಜಕಾರಣದಲ್ಲಿ ಯಾವ ವಿಚಾರವೂ ಗೌಪ್ಯವಾಗಿ ಇರುವುದಿಲ್ಲ ಎಂದರು.