ಮೈಸೂರು: ಜನರನ್ನು ಎಷ್ಟು ದಿನ ಅಂತ ಲಾಕ್‌ಡೌನ್ ಮಾಡಿ ಮನೆಯೊಳಗೆ ಕೂರಿಸಲು ಆಗುತ್ತೆ?, ಇದರಿಂದ ಜೀವನ ಹಾಳಾಗುತ್ತದೆ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಜೀವನ ನಡೆಸಬೇಕು. ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಅವಶ್ಯಕತೆ ಇಲ್ಲ ಎಂದು ಸಂಸದ ಪ್ರತಾಪ್ ಸಿಂಹ ಅಭಿಪ್ರಾಯಪಟ್ಟರು.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರ್ಕಾರ ಅಂದಮೇಲೆ ಜೀವನೂ ಉಳಿಸಬೇಕು, ಜನಜೀವನವೂ ಸರಾಗವಾಗಿ ನಡೆಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಎಲ್ಲಾ ರೀತಿಯ ವ್ಯವಸ್ಥೆ ಮಾಡುತ್ತಿದೆ. ಇವತ್ತು 30 ಜಿಲ್ಲೆಗಳಲ್ಲೂ ಕೂಡ ಕೋವಿಡ್ ಟೆಸ್ಟ್ ಲ್ಯಾಬ್ಗಳು, ಐಸೊಲೇಷನ್ ವ್ಯವಸ್ಥೆಗಳಾಗಿವೆ. ಪ್ರಧಾನಿ ಮೋದಿಯವರು ಸಾಕಷ್ಟು ವಿಚಾರ ಮಾಡಿ ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಗೊಳಿಸಿದ್ದಾರೆ ಎಂದು ಅವರು ಹೇಳಿದರು.
ಮುಂಬೈ ಮತ್ತು ದೆಹಲಿಗೆ ಹೋಲಿಸಿ, ಇವತ್ತು ಮುಂಬೈ ಪರಿಸ್ಥಿತಿ ಹೇಗಾಗಿದೆ?, ಬೆಂಗಳೂರಿನಲ್ಲಿ ನನಗೆ ಗೊತ್ತಿರುವ ಹಾಗೆ 500ಕ್ಕಿಂತ ಕಡಿಮೆ ಸಕ್ರಿಯ ಸೋಂಕಿತ ಪ್ರಕರಣಗಳಿವೆ. ದೆಹಲಿಯಲ್ಲಿ 30 ಸಾವಿರ ಕೇಸುಗಳಿವೆ. ಬೆಂಗಳೂರಿನಲ್ಲಿ ಯಡಿಯೂರಪ್ಪನವರ ನೇತೃತ್ವದಲ್ಲಿ ಇಬ್ಬರು ಸಚಿವರಾದ ಶ್ರೀರಾಮುಲು ಹಾಗೂ ಸುಧಾಕರ್ ಸೇರಿದಂತೆ ಎಲ್ಲರ ಪ್ರಯತ್ನದ ಫಲದಿಂದ ಕೊರೊನಾ ಹತೋಟಿಗೆ ಬಂದಿದೆ ಎಂದರು.
ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಬೇಕಾದರೆ ಪೋಷಕರು, ಸಾರ್ವಜನಿಕರು, ಅಧಿಕಾರಿ ವರ್ಗ, ಶಿಕ್ಷಕರು ಸೇರಿದಂತೆ ಪ್ರತಿಯೊಬ್ಬರ ಸಹಕಾರ ಇರಬೇಕಾಗುತ್ತದೆ ಎಂದು ಪ್ರತಾಪ್ ಸಿಂಹ ಹೇಳಿದರು.