ಮೈಸೂರು: ದಿನೇ ದಿನೇ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ನಂಜನಗೂಡಿನ ಪಂಚ ಮಹಾರಥೋತ್ಸವ ಜಾತ್ರೆಯನ್ನು ರದ್ದು ಮಾಡಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ ಹೊರಡಿಸಿದ್ದಾರೆ.
ನಂಜನಗೂಡು ತಾಲೂಕಿನ ನಂಜುಂಡೇಶ್ವರ ದೇವಸ್ಥಾನದಲ್ಲಿ ಮಾ.19ರಿಂದ 30ರವರೆಗೆ ಜಾತ್ರಾ ಮಹೋತ್ಸವ ಹಾಗೂ ಮಾ.26ರಂದು ಪಂಚ ಮಹಾರಥೋತ್ಸವಕ್ಕೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಸಾಂಪ್ರದಾಯಿಕವಾಗಿ ಚಿಕ್ಕ ತೇರನ್ನು ಎಳೆಯಲು ಅನುಮತಿ ನೀಡಿದೆ. ಷರತ್ತಿಗೊಳಪಡಿಸಿ ಸಾಂಕೇತಿಕ ರಥೋತ್ಸವಕ್ಕೆ ಸಮ್ಮತಿ ನೀಡಿರುವ ಜಿಲ್ಲಾಡಳಿತ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯಗೊಳಿಸಿದೆ.
ಓದಿ: ಕೊರೊನಾ ಎರಡನೇ ಅಲೆ ಭೀತಿ: ಇಂದು ಪ್ರಧಾನಿ ಜೊತೆ ಸಿಎಂ ವಿಡಿಯೋ ಸಂವಾದ
ಶಿಷ್ಟಾಚಾರದ ಪ್ರಕಾರ ಗಣ್ಯರು, ಅಧಿಕಾರಿಗಳು, ಸ್ಥಳಿಯರಿಗೆ ಮಾತ್ರ ಉಪಸ್ಥಿತಿಗೆ ಅವಕಾಶ ಸಿಗಲಿದ್ದು, ಹೊರ ರಾಜ್ಯ, ಹೊರ ಜಿಲ್ಲೆ ಹಾಗೂ ಹೊರ ತಾಲೂಕಿನ ಭಕ್ತಾದಿಗಳಿಗೆ ನಿರ್ಬಂಧ ವಿಧಿಸಲಾಗಿದೆ. ಕೊರೊನಾ ಎರಡನೇ ಅಲೆ ಭೀತಿ ಹಿನ್ನೆಲೆಯಲ್ಲಿ ಪಂಚ ರಥಮಹೋತ್ಸವವನ್ನು ರದ್ದುಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.