ಮೈಸೂರು: ಯುವಕನೊಬ್ಬ ತನ್ನ ಪ್ರೇಮ ವೈಫಲ್ಯ ಮತ್ತು ತಂಗಿ ಮದುವೆ ರದ್ದಾಗಿದ್ದರಿಂದ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ವಿಜಯ ಶ್ರೀಪುರದಲ್ಲಿ ನಡೆದಿದೆ.
ಹೀಗೆ ಆತ್ಮಹತ್ಯೆಗೆ ಶರಣಾದ ಯುವಕ ಚೇತನ್ ಶರ್ಮಾ (29). ಈತ ಮೂಲತಃ ಬೆಂಗಳೂರಿನವನಾಗಿದ್ದು, ಮೈಸೂರಿನಲ್ಲಿ ಬಾಡಿಗೆ ಮನೆ ಪಡೆದು ವಾಸವಿದ್ದ. ಚೇತನ್ ಕಳೆದ 10 ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಇವರಿಬ್ಬರ ಪ್ರೇಮ ಕಾರಣಾಂತರಗಳಿಂದ ಮುರಿದು ಬಿದ್ದಿದೆ. ಇದರಿಂದ ಚೇತನ್ ಶರ್ಮಾ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ.
ಅಲ್ಲದೆ ಇತ್ತೀಚೆಗೆ ನಿಗದಿಯಾಗಿದ್ದ ತನ್ನ ತಂಗಿಯ ಮದುವೆಯೂ ಸಹ ನಿಂತು ಹೋದ ಕಾರಣ ಚೇತನ್ ಮಾನಸಿಕ ಖಿನ್ನತೆಗೆ ಒಳಗಾಗಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇನ್ನು ಈ ಸಂಬಂಧ ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.