ಮೈಸೂರು: ಕೊರೊನಾ ಸೋಂಕು ಪೀಡಿತರ ಪಟ್ಟಿಯಲ್ಲಿ ರಾಜ್ಯದಲ್ಲಿ 2ನೇ ಸ್ಥಾನದಲ್ಲಿ ಇದ್ದ ಮೈಸೂರು ಈಗ ಮಹಾಮಾರಿಯನ್ನ ಯಶಸ್ವಿಯಾಗಿ ಹಿಮ್ಮೆಟ್ಟಿಸಿದೆ. ಸೋಂಕಿನಿಂದ ಗುಣಮುಖರಾಗಿ ಮನೆಗೆ ತೆರಳುತ್ತಿರುವವರ ಪಟ್ಟಿಯಲ್ಲಿ ಮೈಸೂರು ಮೊದಲ ಸ್ಥಾನದಲ್ಲಿದೆ. ಜಿಲ್ಲೆಯಲ್ಲಿ ಈವರೆಗೆ 90 ಕೊರೊನಾ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಮನೆಗೆ ಮರಳಿದ್ದಾರೆ. 8 ಮಂದಿ ಚೇತರಿಸಿಕೊಳ್ಳುತ್ತಿದ್ದಾರೆ. ಒಂದೆರಡು ದಿನಗಳಲ್ಲಿ ಆಸ್ಪತ್ರೆಯಿಂದ ಇವರೆಲ್ಲರೂ ಡಿಸ್ಚಾರ್ಜ್ ಆಗಲಿದ್ದಾರೆ. ಸೋಂಕಿನಿಂದ ಜಿಲ್ಲೆಯಲ್ಲಿ ಯಾವುದೇ ಸಾವು ಸಂಭವಿಸಿಲ್ಲ. ಸದ್ಯದಲ್ಲೇ ಸೋಂಕಿತರ ಜಿಲ್ಲೆ ಎಂಬ ಕುಖ್ಯಾತಿಯಿಂದ ಮೈಸೂರು ಶೀಘ್ರವೇ ಹೊರ ಬರಲಿದೆ.
ಜಿಲ್ಲೆಯಲ್ಲಿ ಮಾರ್ಚ್ 26ರಿಂದ ಈವರೆಗೆ ಸುಮಾರು 4,762 ಮಂದಿ ಮೇಲೆ ನಿಗಾ ಇಡಲಾಗಿದೆ. ಇವರಲ್ಲಿ 4728 ಮಂದಿ ತಮ್ಮ ಹೋಮ್ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ್ದಾರೆ. ಈಗ 26 ಮಂದಿ ಮಾತ್ರ ಹೋಮ್ ಕ್ವಾರಂಟೈನ್ನಲ್ಲಿದ್ದಾರೆ. 8 ಮಂದಿ ಕೊರೊನಾ ಪೀಡಿತರು ಮಾತ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ತಿಳಿಸಿದ್ದಾರೆ.
ಕೊರೊನಾ ಹಾಟ್ಸ್ಪಾಟ್ ಜ್ಯುಬಿಲಿಯಂಟ್ಗೆ ಕಡಿವಾಣ : ಕೊರೊನಾ ಸೋಂಕಿತರ ಹಾಟ್ಸ್ಪಾಟ್ ಆಗಿದ್ದ ನಂಜನಗೂಡಿನ ಜ್ಯುಬಿಲಿಯಂಟ್ ಕಾರ್ಖಾನೆಯ ಸಾವಿರಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಕಾಣಿಸುವ ಆತಂಕವಿತ್ತು. ಮೊದಲ ಸೋಂಕಿತ ಪಿ-52 ಮತ್ತು ಎಲ್ಲಾ ನೌಕರರನ್ನು ನಂಜನಗೂಡು ಮತ್ತು ಮೈಸೂರಿನಲ್ಲಿ ಹೋಮ್ ಕ್ವಾರಂಟೈನ್ ಮಾಡಲಾಯಿತು. ಆ ಮೂಲಕ ಸೋಂಕು ಇತರರಿಗೆ ಹರಡದಂತೆ ತಕ್ಷಣ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳ ತಂಡ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡಿತು. ಇದರಿಂದ ಸಾಮೂಹಿಕವಾಗಿ ಜ್ಯುಬಿಲಿಯಂಟ್ ಸೋಂಕು ಇತರರಿಗೆ ಹರಡದಂತೆ ನೋಡಿಕೊಳ್ಳುವಲ್ಲಿ ಯಶ್ವಸಿಯಾಗಿತ್ತು.
ಈ ಕಾರ್ಖಾನೆಯ ನೌಕರರು, ಕುಟುಂಬದವರು ಹಾಗೂ ಸಂಬಂಧಿಕರು ಸೇರಿ ಈವರೆಗೆ 74 ಮಂದಿಯಲ್ಲಿ ಸೋಂಕು ಧೃಡಪಟ್ಟಿದೆ. ಅವರುಗಳಲ್ಲಿ ಬಹುತೇಕ ಎಲ್ಲರೂ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 90 ಪ್ರಕರಣಗಳಲ್ಲಿ 78 ಜ್ಯುಬಿಲಿಯಂಟ್, 10 ಮಂದಿ ತಬ್ಲಿಘಿ ಜಮಾತ್ ಹಾಗೂ ಇಬ್ಬರು ವಿದೇಶದಿಂದ ವಾಪಸ್ ಆದವರು. ಮತ್ತಿಬ್ಬರು ವಿದೇಶದಿಂದ ಬಂದವರ ಸಂಪರ್ಕದಿಂದ ಸೋಂಕು ಹೊಂದಿದವರಿದ್ದರು. ಇಬ್ಬರು ಉಸಿರಾಟ ತೊಂದರೆಯಿಂದ ಸೋಂಕು ಹೊಂದಿದವರಾಗಿದ್ದು, ಗುಣಮುಖರಾಗಿ ಈಗಾಗಲೇ ಮನೆಗೆ ತೆರೆಳಿದ್ದಾರೆ. ಇಲ್ಲಿ ಸೋಂಕಿನ ಮೂಲವಾಗಿದ್ದ ಜ್ಯುಬಿಲಿಯಂಟ್ ನೌಕರರು ಈಗ ಸೋಂಕು ಮುಕ್ತರಾಗಿದ್ದಾರೆ.
ಮೈಸೂರಿನಲ್ಲಿ ಅಧಿಕಾರಿಗಳ ಟೀಂ ವರ್ಕ್ : ಕೊರೊನಾ ಹಾಟ್ಸ್ಪಾಟ್ ಆಗಿ ರೆಡ್ಝೋನ್ನಲ್ಲಿದ್ದ ಮೈಸೂರು, ಪ್ರವಾಸಿಗರ ನಗರವಾಗಿದ್ದು ಇಲ್ಲಿ ಸೋಂಕು ಹೆಚ್ಚಾದರೆ ನಿಯಂತ್ರಣಕ್ಕೆ ಬರುವುದು ಕಷ್ಟ ಎಂದು ತಿಳಿದ ಅಧಿಕಾರಿಗಳು ಹಾಗೂ ರಾಜಕಾರಣಿಗಳು ಒಟ್ಟಾಗಿ ಕೆಲಸ ಶುರು ಮಾಡಿದ್ದರು. ಪ್ರಾರಂಭಿಕವಾಗಿ ಜ್ಯುಬಿಲಿಯಂಟ್ ಸೋಂಕು ಹರಡದಂತೆ, ತಬ್ಲಿಘಿ ಜಮಾತ್ ಜನರು ಹೆಚ್ಚಾಗಿ ಓಡಾಡದಂತೆ ಹೋಮ್ ಕ್ವಾರಂಟೈನ್ ಮಾಡಲಾಗಿತ್ತು. ಇದರ ಜೊತೆಗೆ ತುರ್ತು ಪರಿಸ್ಥಿತಿಯಲ್ಲಿ ಅಗತ್ಯ ಕ್ರಮಕೈಗೊಂಡ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ನೇತೃತ್ವದ ಅಧಿಕಾರಿಗಳ ತಂಡ ಕಟ್ಟಿದರು. ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಾಗೂ ಇಂದಿನ ಸಚಿವ ಎಸ್ ಟಿ ಸೋಮಶೇಖರ್ ಅವರ ಸಹಕಾರದ ಜೊತೆಗೆ ಕೊರೊನಾ ವಾರಿಯರ್ಸ್ ಹಗಲಿರುಳು ದುಡಿದ ಕಾರಣದಿಂದ ಕೊರೊನಾ ಮುಕ್ತ ಜಿಲ್ಲೆ ಎಂಬ ಹೆಗ್ಗಳಿಕೆಯ ಕಡೆಗೆ ಮೈಸೂರು ದಾಪುಗಾಲಿಡುತ್ತಿದೆ.