ಬೆಂಗಳೂರು: ಕರ್ನಾಟಕದ ಪ್ರತಿಷ್ಠಿತ ಐಕಾನಿಕ್ ಐಷಾರಾಮಿ ಪ್ರವಾಸಿ ರೈಲಾದ ಗೋಲ್ಡನ್ ಚಾರಿಯೇಟ್ ಇಂದಿನಿಂದ ಪುನಾರಂಭವಾಗಿದೆ. 2018 ರಲ್ಲಿ ಕಾರ್ಯಾಚರಣೆ ಸ್ಥಗಿತವಾಗಿದ್ದ ರೈಲಿಗೆ ಮತ್ತೆ ಯಶವಂತಪುರ ನಿಲ್ದಾಣದಲ್ಲಿ ರಾಜ್ಯದ ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಈ ರೈಲು ಮತ್ತೆ ಪರಂಪರ, ಐಷಾರಾಮಿ ಮತ್ತು ಸಾಟಿಯಿಲ್ಲದ ಪ್ರಯಾಣದ ಅನುಭವಗಳನ್ನು ಪ್ರಯಾಣಿಕರಿಗೆ ನೀಡಲಿದೆ. ಕರ್ನಾಟಕ ಮತ್ತು ದಕ್ಷಿಣ ಭಾರತದ ಸಾಂಸ್ಕೃತಿಕ ಶ್ರೀಮಂತಿಕೆ ಮತ್ತು ರಮಣೀಯ ಸೌಂದರ್ಯವನ್ನು ಇದು ಪ್ರತಿನಿಧಿಸಲಿದೆ. ಗೋಲ್ಡನ್ ಚಾರಿಯೇಟ್ ರೈಲು ಜಾಗತಿಕವಾಗಿ ಅತ್ಯುತ್ತಮ ಐಷಾರಾಮಿ ರೈಲು ಪ್ರಯಾಣಗಳಲ್ಲಿ ಒಂದಾಗಿ ಅಂತಾರಾಷ್ಟ್ರೀಯ ಮೆಚ್ಚುಗೆಯನ್ನು ಪುನಃ ಗಳಿಸಲಿದೆ.
ಮೊದಲು ಗೋಲ್ಡನ್ ಚಾರಿಯೇಟ್ ರೈಲಿನ ಪರಿಕಲ್ಪನೆಯನ್ನು 2002 ರಲ್ಲಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಭಾರತೀಯ ರೈಲ್ವೇಯ ಸಹಯೋಗದಲ್ಲಿ ರೂಪಿಸಿತ್ತು. ಕರ್ನಾಟಕ ಮತ್ತು ಭಾರತದ ವಿಶಾಲವಾದ ದಕ್ಷಿಣ ಪ್ರದೇಶದಲ್ಲಿನ ಪ್ರವಾಸೋದ್ಯಮವನ್ನು ಉತ್ತೇಜಿಸುವ ಐಷಾರಾಮಿ ರೈಲನ್ನು ಅಭಿವೃದ್ಧಿಪಡಿಸಲು 2002 ರಲ್ಲಿ ರೈಲ್ವೆ ಸಚಿವಾಲಯದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.
ರಾಜಸ್ಥಾನದ ಪ್ಯಾಲೇಸ್ ಆನ್ ವ್ಹೀಲ್ಸ್ ಐಷಾರಾಮಿ ರೈಲು ಯೋಜನೆಗಳ ಯಶಸ್ಸಿನಿಂದ ಸ್ಫೂರ್ತಿ ಪಡೆದ ಗೋಲ್ಡನ್ ಚಾರಿಯೇಟ್ ಅನ್ನು ಕರ್ನಾಟಕದ ವಾಸ್ತುಶಿಲ್ಪದ ಅದ್ಭುತಗಳು, ಶ್ರೀಮಂತ ಇತಿಹಾಸ ಮತ್ತು ನೈಸರ್ಗಿಕ ಸೌಂದರ್ಯವನ್ನು ಪ್ರದರ್ಶಿಸುವ ಐಷಾರಾಮಿ ರೈಲಿನಂತೆ ರೂಪಿಸಲಾಯಿತು. 2008 ರಿಂದ ಕಾರ್ಯಾರಂಭ ಮಾಡಿದ ರೈಲನ್ನು ಹಲವಾರು ತಾಂತ್ರಿಕ ಮತ್ತು ಖರ್ಚು ವೆಚ್ಚಗಳ ಕಾರಣಕ್ಕೆ 6 ವರ್ಷಗಳ ಹಿಂದೆ ಸ್ಥಗಿತಗೊಳಿಸಲಾಗಿತ್ತು.
ರೈಲಿನ ಮಾಲೀಕತ್ವ ಶೇಕಡಾ 50 ರಷ್ಟು ಭಾರತೀಯ ರೈಲ್ವೆ ಇಲಾಖೆಯದ್ದಾಗಿದೆ. ತಲಾ ಶೇಕಡಾ 25 ರಷ್ಟು ಪಾಲು ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯ ಮತ್ತು ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯದ್ದಾಗಿದೆ. ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯ ಮೂಲಕ ವಿನ್ಯಾಸಗೊಂಡಿರುವ ಗೋಲ್ಡನ್ ಚಾರಿಯೇಟ್‌ನ ಒಳಾಂಗಣವು ಸಾಂಪ್ರದಾಯಿಕ ದಕ್ಷಿಣ ಭಾರತೀಯ ಸೌಂದರ್ಯವನ್ನು ಪ್ರತಿಬಿಂಬಿಸುತ್ತಿದೆ.
ಸುಮಾರು 900 ಲೇಔಟ್‌ಗಳನ್ನು ತಯಾರಿಸಿ ಈ ರೈಲಿಗೆ ಅಂತಿಮ ರೂಪುರೇಷೆಯನ್ನು ನೀಡಲಾಗಿದೆ. ವಾಸ್ತುಶಿಲ್ಪಿ ಕುಸುಮ್ ಫ್ರೆಂಡ್ಸ್ ಅವರ 200 ನುರಿತ ಬಡಗಿಗಳ ತಂಡದೊಂದಿಗೆ ಸಾಂಪ್ರದಾಯಿಕ ಸೌಂದರ್ಯ ಮತ್ತು ಆಧುನಿಕತೆಯನ್ನು ತರಲು ನಾಲ್ಕು ತಿಂಗಳ ಕಾಲ ಶ್ರಮವಹಿಸಲಾಗಿದೆ.
ಪ್ರವಾಸೋದ್ಯಮ ಸಚಿವ ಹೆಚ್. ಕೆ. ಪಾಟೀಲ್ ಮಾತನಾಡಿ, "ಹೆಮ್ಮೆಯ ಗೋಲ್ಡನ್ ಚಾರಿಯೇಟ್ ರೈಲಿಗೆ ಮತ್ತೆ ಚಾಲನೆ ನೀಡಲಾಗಿದೆ. ನಮ್ಮ ರಾಜ್ಯದ ಮತ್ತು ದಕ್ಷಿಣ ಭಾರತ ರಾಜ್ಯಗಳ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಈ ರೈಲಿನಿಂದ ಸಾಧ್ಯವಾಗಲಿದೆ. 2018 ರಲ್ಲಿ ಖರ್ಚು ವೆಚ್ಚದ ಕಾರಣ ರೈಲನ್ನು ನಿಲ್ಲಿಸಲಾಗಿತ್ತು. ಮತ್ತೆ ಪ್ರಯಾಣಿಕರ ಒತ್ತಾಯದ ಮೇರೆಗೆ ರೈಲಿಗೆ ಚಾಲನೆ ನೀಡಲಾಗಿದೆ. ಮೈಸೂರು, ನಂಜನಗೂಡು, ಹಂಪಿ, ಕೇರಳ, ತಮಿಳುನಾಡು, ಗೋವಾ ಸೇರಿದಂತೆ ಹಲವು ಪ್ರವಾಸಿ ತಾಣಗಳನ್ನು ತಲುಪಲಿದೆ. ಕೇಂದ್ರ ಸರ್ಕಾರದಿಂದ ಸಹಕಾರ ಕೂಡ ಸಿಕ್ಕಿರುವುದು ಸಂತಸ ತಂದಿದೆ. ದೇಶಕ್ಕೆ ಮತ್ತು ಪ್ರವಾಸಿಗರಿಗೆ ಹೆಮ್ಮೆಯ ಸಮರ್ಪಣೆ ಈ ರೈಲಾಗಿದೆ. ಐ.ಆರ್.ಸಿ.ಟಿ.ಸಿ ಯ ಸಹಕಾರಕ್ಕೆ ಸಹ ಅಭಿನಂದನೆ ಮತ್ತು ಕೃತಜ್ಞತೆಯನ್ನು ಸಲ್ಲಿಸುತ್ತೇನೆ" ಎಂದು ತಿಳಿಸಿದರು.
ಟಿಕೆಟ್ ದರವೆಷ್ಟು?: ಇಂದಿನಿಂದ ಜ್ಯುವೆಲ್ ಆಫ್ ಸೌತ್ ಪ್ಯಾಕೇಜ್ ಪ್ರಯಾಣ ಪ್ರಾರಂಭವಾಗಿದ್ದು, ರೈಲು ಯಶವಂತಪುರದಿಂದ ಮೈಸೂರು, ಕಾಂಚೀಪುರಂ, ಮಹಾಬಲಿಪುರಂ, ತಂಜಾವೂರ್, ಚೆಟ್ಟಿನಾಡ್/ಕರೈಕುಡಿ, ಕೊಚಿನ್, ಚರ್ಟಲಗೆ ತಲುಪಿ ವಾಪಸ್ ಬರಲಿದೆ. ಈ ಪ್ಯಾಕೇಜ್ನಲ್ಲಿ ಪ್ರತಿ ಪ್ರಯಾಣಿಕನಿಗೆ 4.7 ಲಕ್ಷ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ. ಮುಂದಿನ ವರ್ಷದ ಫೆಬ್ರವರಿ 1 ರಿಂದ 6 ರವರೆಗೆ ಪ್ರೈಡ್ ಆಫ್ ಕರ್ನಾಟಕ ಪ್ಯಾಕೇಜ್ ಘೋಷಿಸಲಾಗಿದ್ದು, ಅದು ನಂಜನಗೂಡು, ಮೈಸೂರು, ಹಳೆಬೀಡು, ಚಿಕ್ಕಮಗಳೂರು, ಹೊಸಪೇಟೆ, ಗೋವಾ ಸುತ್ತಿ ಹಾಕಿ ವಾಪಸ್ ಬೆಂಗಳೂರು ತಲುಪಲಿದೆ. ಈ ಪ್ಯಾಕೇಜ್ನಲ್ಲಿ ಪ್ರತಿ ಪ್ರಯಾಣಿಕನಿಗೆ 2.7 ಲಕ್ಷ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ. ಇನ್ನು ಸೋಜರ್ನ್ ಆಫ್ ಸೌತ್ ಎನ್ನುವ ಪ್ಯಾಕೇಜ್ ಟ್ರಿಪ್ ಡಿಸೆಂಬರ್ 29 ರಿಂದ ಮತ್ತು 2025ರ ಫೆಬ್ರವರಿ 13 ರಿಂದ ಪ್ರಾರಂಭವಾಗಲಿದ್ದು, ಅದು ಆಯ್ಕೆಗನುಗುಣವಾಗಿ ಸಂಚರಿಸಲಿದೆ. ಟಿಕೆಟ್ ಬುಕಿಂಗ್ ಐ.ಆರ್.ಸಿ.ಟಿ.ಸಿ ವೆಬ್ಸೈಟ್ ಮೂಲಕ ಮಾಡಬಹುದಾಗಿದ್ದು, ಮದ್ಯ, ಪಾನೀಯ, ಊಟ ಉಪಚಾರದ ವ್ಯವಸ್ಥೆಗಳ ವೆಚ್ಚವನ್ನು ಟಿಕೆಟ್ ದರದಲ್ಲಿಯೇ ಸೇರಿಸಲಾಗಿದೆ.
ಎಷ್ಟು ಜನ ಪ್ರಯಾಣಿಕರಿಗಿದೆ ಅವಕಾಶ?: 11 ಅತಿಥಿಗಳ ಕೋಚ್ ಈ ರೈಲಿನಲ್ಲಿದ್ದು, ಪ್ರತಿ ಬೋಗಿಯಲ್ಲಿ 4 ರೂಮ್ ಇರಲಿದೆ. ಒಟ್ಟು 88 ಪ್ರಯಾಣಿಕರು ಸಂಚರಿಸುವ ಆವಕಾಶ ಗೋಲ್ಡನ್ ಚಾರಿಯೇಟ್ ರೈಲಿನಲ್ಲಿದೆ. ಇಂದು ಪ್ರಾರಂಭವಾದ ಮೊದಲ ರೈಲಿನಲ್ಲಿ 34 ಮಂದಿ ಪ್ರಯಾಣಿಕರು ಪ್ರಯಾಣಿಸಿದ್ದಾರೆ.
ಇದನ್ನೂ ಓದಿ: ಪ್ರಯಾಣಿಕರೇ ಗಮನಿಸಿ: ಕ್ರಿಸ್ಮಸ್, ಹೊಸ ವರ್ಷದ ಹಿನ್ನೆಲೆ ನೈರುತ್ಯ ರೈಲ್ವೆಯಿಂದ ವಿಶೇಷ ರೈಲು ಸೇವೆ