ಮೈಸೂರು : ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದಾಗಿ ಕಾವೇರಿ ನದಿಯು ತುಂಬಿ ಹರಿಯುತ್ತಿದೆ. ಇನ್ನೂ ಕೆಆರ್‌ನಗರ ತಾಲೂಕಿನ ಚುಂಚನಕಟ್ಟೆ ಗ್ರಾಮದ ಹೊರವಲಯದಲ್ಲಿ ಇರುವ ಧನುಷ್ಕೋಟಿಯಲ್ಲಿ ಜಲಪಾತದ ರೀತಿ ನೀರು ದುಮ್ಮಿಕ್ಕುತ್ತಿದೆ. ಪ್ರತಿವರ್ಷವೂ ಈ ಸೌಂದರ್ಯ ಕಣ್ತುಂಬಿಕೊಳ್ಳಲು ಬರುತ್ತಿದ್ದ ಪ್ರವಾಸಿಗರಿಲ್ಲದೆ ಖಾಲಿ ಖಾಲಿ ಹೊಡೆಯುತ್ತಿದೆ.
ಪ್ರತೀ ವರ್ಷ ಇಲ್ಲಿಗೆ ಪ್ರವಾಸಿಗರ ದಂಡೇ ಹರಿದು ಬರುತ್ತಿತ್ತು. ಆದರೆ, ಈ ಬಾರಿ ಕೊರೊನಾ ಹಿನ್ನೆಲೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿದೆ. ಜಲಪಾತದ ನೀರು ಹರಿದು ನಿಶ್ಯಬ್ಧವಾಗಿ ಕೆಆರ್‌ಎಸ್ ಅಣೆಕಟ್ಟೆ ತಲುಪುತ್ತಿದೆ.
ಧನುಷ್ಕೋಟಿ ನದಿಯ ಹಿಂದಿನ ರೋಚಕ ಕಥೆ : ಆಗಿನ ಕಾಲದಲ್ಲಿ ಚುಂಚನಕಟ್ಟೆ ಗ್ರಾಮವನ್ನು ಚುಂಚ ಎಂಬ ಪಾಳೇಗಾರನು ಆಳುತ್ತಿದ್ದ. ವನವಾಸದಲ್ಲಿದ್ದ ಶ್ರೀರಾಮ, ಸೀತೆ ಹಾಗೂ ಲಕ್ಷ್ಮಣರು ಪಾಳೇಗಾರನ ಅನುಮತಿ ಮೇರೆಗೆ ಈ ಗ್ರಾಮದಲ್ಲಿ ಉಳಿದಿದ್ದರಂತೆ. ಸೀತಾ ಮಾತೆ ಸ್ನಾನಕ್ಕೆ ನೀರು ಕೇಳಿದಾಗ ಶ್ರೀರಾಮನು ಒಂದು ನಿರ್ದಿಷ್ಟ ಸ್ಥಳಕ್ಕೆ ತನ್ನ ಬಾಣ ಬಿಟ್ಟು ನೀರು ಚಿಮ್ಮಿಸಿದ ಸ್ಥಳವೇ ಈ ಧನುಷ್ಕೋಟಿ ನದಿ.. ಅದೇ ನಂಬಿಕೆಯಿಂದ ಇಂದಿಗೂ ಪ್ರವಾಸಿಗರು ಈ ನದಿಗೆ ಪೂಜೆ ಸಲ್ಲಿಸುತ್ತಾರೆ.
ರಾಮನಿಂದ ನಿರ್ಮಾಣಗೊಂಡಿರುವ ಧನುಷ್ಕೋಟಿ, ಸೀತಾಮಡು ಹಾಗೂ ಇಲ್ಲಿನ ಪ್ರಕೃತಿ ಸೌಂದರ್ಯ ಕಣ್ತುಂಬಿಕೊಳ್ಳಲು ನದಿಯ ದಂಡೆಯ ಎರಡು ಕಡೆ ವೀಕ್ಷಣಾ ಸ್ಥಳ ನಿರ್ಮಾಣ ಮಾಡಲಾಗಿದೆ. ಈ ಪ್ರವಾಸಿ ತಾಣದ ಕಾಮಗಾರಿ ಇನ್ನೇನು ಮುಗಿದು ಪ್ರವಾಸಿಗರಿಗೆ ಅನುಕೂಲವಾಗಬೇಕು ಎನ್ನುವಷ್ಟರಲ್ಲಿ ಕೊರೊನಾ ಅಡ್ಡವಾಗಿ ವೀಕ್ಷಣೆಗೆ ಅವಕಾಶವಿಲ್ಲವಾಗಿದೆ.
ಇನ್ನು, ಇಲ್ಲಿನ ಅಭಿವೃದ್ಧಿಗಾಗಿ ಹೆಚ್ ಡಿ ಕುಮಾರಸ್ವಾಮಿ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ₹10 ಕೋಟಿ ಬಿಡುಗಡೆ ಮಾಡಿದ್ದರು. ಇನ್ನೂ ಅಗತ್ಯವಿದ್ರೆ ಮತ್ತಷ್ಟು ಹಣ ಬಿಡುಗಡೆ ಮಾಡಿಸಲು ಪ್ರಯತ್ನಿಸುತ್ತೇನೆ ಅಂತಾ ಕೆಆರ್‌ನಗರ ಶಾಸಕ ಸಾ ರಾ ಮಹೇಶ್ ಭರವಸೆ ನೀಡಿದ್ದರು.