ಮೈಸೂರು: ವೃತ್ತಿ ವೈಷಮ್ಯದಿಂದ ಯುವ ಉದ್ಯಮಿಯನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪಾರಿ ಪಡೆದಿದ್ದ 7 ಜನ ಆರೋಪಿಗಳನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಕೃತ್ಯಕ್ಕೆ ಬಳಸಿದ್ದ ವಾಹನ ಮತ್ತು ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ.
ಇದೇ ತಿಂಗಳ 17ನೇ ತಾರೀಖು ಬೆಳಗ್ಗೆ 10:30ಕ್ಕೆ ಯುವ ಉದ್ಯಮಿ ಅಶ್ರಿತ್ ಎಂಬ ವ್ಯಕ್ತಿ ವಿಜಯನಗರದ 4ನೇ ಹಂತದಲ್ಲಿ ಟೀ ಕುಡಿಯಲು ಬೈಕ್ನಲ್ಲಿ ಬರುತ್ತಿದ್ದ. ಈ ವೇಳೆ ಆತನ ಬೈಕಿಗೆ ಡಿಕ್ಕಿ ಹೊಡೆದು ಆರೋಪಿಗಳು ಸ್ಥಳದಲ್ಲೇ ಕೊಲೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ವಿಜಯನಗರ ಪೊಲೀಸರು, ಆರೋಪಿಗಳ ಪತ್ತೆಗಾಗಿ 2 ತಂಡ ರಚಿಸಿದ್ದರು.
![ವೃತ್ತಿ ವೈಷಮ್ಯದಿಂದ ಯುವ ಉದ್ಯಮಿಯನ್ನು ಬರ್ಬರವಾಗಿ ಹತ್ಯೆ](https://etvbharatimages.akamaized.net/etvbharat/prod-images/kn-mys-4-supari-killer-arrest-news-7208092_22062020154057_2206f_1592820657_520.jpg)
ವೃತ್ತಿ ವೈಷಮ್ಯದಿಂದ ಸುಪಾರಿ:
ಕೊಲೆಯಾದ ಅಶ್ರಿತ್ ಈ ಹಿಂದೆ ರಾಜಾರಾಮ್ ಎಂಬ ವ್ಯಕ್ತಿಯ ಬಳಿ ಹೇರ್ ಮತ್ತು ಸ್ಕಿನ್ ಸಲೂನ್ನಲ್ಲಿ ಕೆಲಸ ಮಾಡುತ್ತಿದ್ದ. ಇಬ್ಬರ ನಡುವೆ ವೈಷಮ್ಯ ಉಂಟಾಗಿ ಕೊಲೆಯಾದ ಅಶ್ರಿತ್ ಬೇರೆ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದ. ಇದರಿಂದ ಕೋಪಗೊಂಡ ರಾಜಾರಾಮ್ ಈತ ನನ್ನ ಕೆಲಸದಲ್ಲಿ ತೊಡಗಿದ್ದಾನೆ. ನನ್ನ ವೃತ್ತಿಯ ಗುಟ್ಟನ್ನು ಹೊರಗೆ ಹೇಳಿದರೆ ತೊಂದರೆ ಎಂದು ಅಶ್ರಿತ್ನನ್ನು ಮುಗಿಸಲು ಸುಪಾರಿ ಕೊಟ್ಟಿದ್ದಾನೆ. ಬಳಿಕ ಸುಪಾರಿ ಹಂತಕರು ಜೂನ್ 17ರಂದು ಅಶ್ರಿತ್ನನ್ನು ಕೊಲೆ ಮಾಡಿ ಪರಾರಿಯಾಗಿದ್ದರು ಎನ್ನಲಾಗಿದೆ.
ಅದರಲ್ಲಿ ಪ್ರಮುಖ ಆರೋಪಿ ಸುಪಾರಿ ನೀಡಿದ ರಾಜಾರಾಮ್ ತಲೆಮರೆಸಿಕೊಂಡಿದ್ದು, ಉಳಿದ ಸುಪಾರಿ ಹಂತಕರಾದ ನವೀನ್, ಅಶೋಕ್, ಪ್ರಶಾಂತ್, ಜಾನಿ, ದಿನೇಶ್, ಮಹೇಶ್ ಮತ್ತು ಮುಬಾರಕ್ ಎಂಬ 7 ಜನ ಬೆಂಗಳೂರು ಮೂಲದ ಸುಪಾರಿ ಹಂತಕರನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ 2 ಬೈಕ್, 1 ಕಾರ್, 1 ಚಾಕುವನ್ನು ವಶಪಡಿಸಕೊಳ್ಳಲಾಗಿದೆ. ಪೊಲೀಸರು ಪ್ರಮುಖ ಆರೋಪಿ, ಸುಪಾರಿ ನೀಡಿದ ರಾಜಾರಾಮ್ ಪತ್ತೆಗಾಗಿ ಬಲೆ ಬೀಸಿದ್ದು ತನಿಖೆ ಕೈಗೊಂಡಿದ್ದಾರೆ.