ಮೈಸೂರು: ಜುಬಿಲೆಂಟ್ ಕಾರ್ಖಾನೆಗೆ ಕೊರೊನಾ ಸೋಂಕು ಹೇಗೆ ಬಂತು ಎಂಬ ಬಗ್ಗೆ ತನಿಖೆಯಾಗುತ್ತಿದ್ದು, ಒಂದೆರಡು ದಿನಗಳಲ್ಲಿ ಗೊತ್ತಾಗಲಿದೆ ಎಂದು ಸಂಸದ ಪ್ರತಾಪ್ ಸಿಂಹ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಜುಬಿಲೆಂಟ್ ಕಾರ್ಖಾನೆಯ ಬಗ್ಗೆ ಸುದೀರ್ಘವಾಗಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ನಾವು ಈಗ ಜುಬಿಲೆಂಟ್ ಫ್ಯಾಕ್ಟರಿಗೆ ಕೊರೊನಾ ವೈರಸ್ ಹೇಗೆ ಬಂತು ಎಂಬ ಬಗ್ಗೆ ತನಿಖೆ ನಡೆಯುತ್ತಿದ್ದು, ಇನ್ನೆರಡು ದಿನಗಳಲ್ಲಿ ತನಿಖೆ ಪೂರ್ಣಗೊಳ್ಳಲಿದೆ ಎಂದರು.
ಜೊತೆಗೆ ಕಂಪನಿಯಲ್ಲಿದ್ದ 1,250ಕ್ಕೂ ಹೆಚ್ಚು ಜನರಿಗೆ ಈಗಾಗಲೇ ಮನೆಯಲ್ಲೆ ಕ್ವಾರಂಟೈನ್ ಮಾಡಲಾಗಿದ್ದು, ಇದರಿಂದ ಯಾರೂ ಭಯಭೀತರಾಗ ಬೇಕಿಲ್ಲ. ಹಾಗಂತ ಮೈ ಮರೆಯಬಾರದು, ಈಗಾಗಲೇ ದುಬೈ ನಿಂದ ಬಂದ ವ್ಯಕ್ತಿ ಗುಣಮುಖನಾಗಿದ್ದು, ಜುಬಿಲೆಂಟ್ ಕಾರ್ಖಾನೆಗೆ ಬಂದ ಕಂಟೈನರ್ ನಿಂದ ವೈರಸ್ ಬಂದಿದೆ ಎಂದು ಹೇಳಲು ಸಾಧ್ಯವಿಲ್ಲ. ಹಾಗೇನಾದರೂ ಸಾಬೀತು ಆದರೂ ಚೀನಾದ ವಿರುದ್ಧ ಕ್ರಮ ಕೈಗೊಳ್ಳಲು ಆಗುತ್ತದೇಯೇ ಎಂದು ಪ್ರಶ್ನೆ ಮಾಡಿದ ಸಂಸದರು, ಈ ವಿಚಾರದಲ್ಲಿ ರಾಜಕಾರಣ ಮಾಡುವುದು ಒಳ್ಳೆಯದಲ್ಲ ಎಂದು ಹೇಳಿದರು.
ಜುಬಿಲೆಂಟ್ ಕಂಪನಿಯಲ್ಲಿ ಇಷ್ಟೆಲ್ಲ ನಡೆಯುತ್ತಿದ್ದರೂ ಕಂಪನಿಯವರು ಸ್ಪಷ್ಟೀಕರಣ ನೀಡದೇ ತಡ ಮಾಡಿದ್ದು ತಪ್ಪಾಗಿದೆ. ಇನ್ನು ಈ ಜುಬಿಲೆಂಟ್ ಕಾರ್ಖಾನೆಯ ನೌಕರರೆಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರ ವರದಿಯ ಸಹ ಬರಬೇಕಾಗಿದೆ. ಕಾರ್ಖಾನೆ ಮುಚ್ಚುವ ಬಗ್ಗೆ ಮಾತನಾಡುವ ಬದಲು ನಾವು ಈಗ ಬಂದಿರುವ ಸಂಕಷ್ಟದಿಂದ ಪಾರಾಗುವ ಬಗ್ಗೆ ಯೋಚಿಸೋಣ, ಮುಖ್ಯವಾಗಿ ಜುಬಿಲೆಂಟ್ ಕಾರ್ಖಾನೆ ದೇಶದ ಹಲವು ಕಡೆ ತನ್ನ ಶಾಖೆಗಳನ್ನು ಹೊಂದಿದ್ದು, ಅದರಲ್ಲಿ ದೆಹಲಿಯಲ್ಲಿರುವ ಶಾಖೆಯಿಂದ ಮೈಸೂರು ಶಾಖೆಗೆ ಕೆಲವು ನೌಕರರು ಬಂದು ಹೋಗಿದ್ದಾರೆ. ಅವರನ್ನೂ ಸಹ ಪರೀಕ್ಷೆ ಮಾಡಬೇಕು ಒಂದೆರಡು ದಿನಗಳಲ್ಲಿ ಎಲ್ಲವೂ ಸ್ಪಷ್ಟವಾಗಿ ತಿಳಿಯಲಿದೆ ಎಂದರು.