ಮೈಸೂರು: ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಡ್ರಗ್ಸ್ ವಿಚಾರದಲ್ಲಿ ಹಿಟ್ ಅಂಡ್ ರನ್ ಕೆಲಸ ಮಾಡಬಾರದು ಎಂದು ವಿಧಾನ ಪರಿಷತ್ ಸದಸ್ಯ ರಘು ಆಚಾರ್ ಕಿಡಿಕಾರಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಡ್ರಗ್ಸ್ ಮಾಫಿಯಾದಲ್ಲಿ 35 ಮಂದಿ ರಾಜಕಾರಣಿಗಳು ಇದ್ದಾರೆ ಅಂತಾರೆ. ಅವರ ಹೆಸರನ್ನು ಬಿಡುಗಡೆ ಮಾಡಲಿ. ಇಲ್ಲವಾದರೆ ಆ ಪಟ್ಟಿ ನನಗೆ ಕೊಟ್ಟರೆ ನಾನೇ ಬಿಡುಗಡೆ ಮಾಡುವೆ. ಯಾವ ಪಕ್ಷದ ರಾಜಕಾರಣಿ ತಪ್ಪು ಮಾಡಿದರು ತಪ್ಪು ತಪ್ಪೇ. ಇದರಲ್ಲಿ ಸಮರ್ಥನೆ ಬೇಡ ಎಂದು ಕುಟುಕಿದರು.
ಮೈಸೂರಿನ ವಿವಿಧ ಕಾಲೇಜುಗಳಲ್ಲಿ ಡ್ರಗ್ಸ್ ಮಾಫಿಯಾ ನಡೆಯುತ್ತಿದ್ದೆ ಅಂತಾರೆ. ಅದರ ಬಗ್ಗೆಯೂ ಮಾಹಿತಿ ನೀಡಲಿ. ನನ್ನ ಜಿಲ್ಲೆಯ ಬಗ್ಗೆ ನನಗೆ ಗೊತ್ತಿದೆ. ಇಂತಹ ಹಿಟ್ ಅಂಡ್ ರನ್ ಹೇಳಿಕೆ ಕೊಡುವ ಬದಲು, ಜನ ಸೇವೆ ಮಾಡಲಿ ಎಂದು ಹೇಳಿದರು.
ಶಾಸಕ ಜಮೀರ್ ಅಹ್ಮದ್ ಅವರ ಹೆಸರು ಡ್ರಗ್ಸ್ ಮಾಫಿಯಾದಲ್ಲಿ ಕೇಳಿ ಬಂದರೆ ವಿಚಾರಣೆ ಮಾಡಲಿ. ಯಾವ ಪಕ್ಷದ ರಾಜಕಾರಣಿ ಭಾಗಿಯಾಗಿದ್ದರು ಶಿಕ್ಷೆಯಾಗಲಿ ಎಂದರು.