ಮೈಸೂರು: ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೃಗಾಲಯಗಳಿಗೆ ಪ್ರವಾಸಿಗರ ನಿರ್ಬಂಧ ಕುರಿತು ಯಾವುದೇ ಚಿಂತನೆ ಸದ್ಯಕ್ಕಿಲ್ಲ ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಅರವಿಂದ ಲಿಂಬಾವಳಿ ಹೇಳಿದರು.
ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ ನಂತರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
ಮೃಗಾಲಯಗಳಿಗೆ ಪ್ರವಾಸಿಗರ ನಿರ್ಬಂಧ ಕುರಿತು ಆರೋಗ್ಯ ಇಲಾಖೆ ಹಾಗೂ ಗೃಹ ಇಲಾಖೆ ಮಾಹಿತಿ ನೀಡಿದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಆದರೆ ಸದ್ಯಕ್ಕೆ ಮೃಗಾಲಯಗಳಿಗೆ ಪ್ರವಾಸಿಗರ ನಿರ್ಬಂಧ ಇರುವುದಿಲ್ಲ ಎಂದು ತಿಳಿಸಿದರು.
ಕಾಡಿನ ಪ್ರಾಣಿಗಳಿಗೆ ನೀರಿನ ಸಮಸ್ಯೆ ಆಗುತ್ತಿರುವುದರಿಂದ ಅಲ್ಲಿ ಕೆರೆಕಟ್ಟೆ ಹಾಗೂ ಹೊಂಡಗಳನ್ನು ಅಭಿವೃದ್ಧಿಪಡಿಸಲಾಗುವುದು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದ ಜೊತೆಗೆ ಕಾರ್ಪೋರೇಟ್ ಕಂಪನಿಗಳಿಂದ ಸಹಾಯ ಕೇಳಲಾಗುವುದು. ಪ್ರಾಣಿಗಳಿಗೆ ಬೇಸಿಗೆ ಸಮಯದಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಅಭಯಾರಣ್ಯಗಳಲ್ಲಿ ಬೆಂಕಿ ಸಮಸ್ಯೆ ಕಾಣಿಸಿಕೊಂಡಿಲ್ಲ. ಅಂತಹ ಪರಿಸ್ಥಿತಿ ಎದುರಾದರೆ ಅಧಿಕಾರಿಗಳು ಕೆಲಸ ಮಾಡಲು ಸಜ್ಜಾಗಿದ್ದಾರೆ. ಒಂದೆರಡು ಕಡೆ ಸಣ್ಣಪುಟ್ಟ ಬೆಂಕಿ ಬಿದ್ದಿರುವ ಘಟನೆ ಕೇಳಿ ನಡೆದಿವೆ. ಇದರಿಂದ ಅಧಿಕಾರಿಗಳು ಅಲರ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಕಲಾವಿದರಿಗೆ ಮಾಸಾಶನ:
ಕಲಾವಿದರಿಗೆ ಮಾಸಾಶನ ಕೊಡುವುದರಲ್ಲಿ ದೋಷಗಳಾಗಿವೆ. ಇದನ್ನು ಸರಿಪಡಿಸಿ ಪಟ್ಟಿ ಪರಿಷ್ಕರಣೆ ಮಾಡಿ ತಾತ್ಕಾಲಿಕ ಹಾಗೂ ಕಾಯಂ ಆಗಿ ಮಾಸಾಶನ ನೀಡಲಾಗುವುದು ಎಂದರು.