ಮೈಸೂರು: ಸ್ಲಂಗಳಲ್ಲಿ ಆಹಾರದ ಅಭಾವ ಹೆಚ್ಚಾಗಿದ್ದು, ಅವರ ಹಸಿವು ನೀಗಿಸಲು ದಾನಿಗಳಿಂದ ಆಹಾರ ಸಾಮಗ್ರಿ ಸಂಗ್ರಹಿಸಲಾಗುತ್ತಿದೆ ಎಂದು ಮೇಯರ್ ತಸ್ನೀಂ ಹೇಳಿದರು.
ನಗರ ಪಾಲಿಕೆ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಹಾರಕ್ಕಾಗಿ ಜನರು ಪರದಾಡುತ್ತಿದ್ದಾರೆ. ನಿರ್ಗತಿಕರು, ಭಿಕ್ಷುಕರು, ಅನಾಥರು ಹಸಿವಿನಿಂದ ಸಾಯುವಂತಾಗಿದೆ ದಾನಿಗಳು ಪಾಲಿಕೆ ಜೊತೆ ಕೈಜೋಡಿಸಿ, ನೆರವು ನೀಡಬೇಕು ಎಂದು ವಿನಂತಿಸಿಕೊಂಡರು.
ಹಣಕ್ಕಿಂತ ದವಸ, ಧಾನ್ಯಗಳನ್ನು ಸಾಧ್ಯವಾದಷ್ಟು ಹೆಚ್ಚಾಗಿ ನೀಡಿ. ನಗರ ಪಾಲಿಕೆ ಆಹಾರ ಪದಾರ್ಥಗಳನ್ನು ಸ್ಲಂ ಹಾಗೂ ಅವಶ್ಯಕತೆ ಇರುವ ಜನರಿಗೆ ವಿತರಿಸುತ್ತದೆ ಎಂದು ಹೇಳಿದರು.
ಇನ್ನೊಂದು ಕಡೆ ಪಾಲಿಕೆಯಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕ್ವಾರಂಟೈನ್ನಲ್ಲಿ ಇರುವ ಮನೆಗಳ ಸುತ್ತಲೂ ಸ್ಪ್ರೇ ಮಾಡಲಾಗುತ್ತಿದೆ. ನಗರದ ಸ್ವಚ್ಛತೆ ಕಾಪಾಡುವ ಪೌರಕಾರ್ಮಿಕರಿಗೂ ಸೂಕ್ತ ತರಬೇತಿ ನೀಡಲಾಗಿದೆ ಎಂದರು.
ನಗರ ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ಮಾತನಾಡಿ, ಮೈಸೂರಿನಲ್ಲಿ ಇರುವ ಬೇಕರಿಗಳ ಬಾಗಿಲು ಮುಚ್ಚಿದ್ದು, ನಾವು ಅವರಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಬ್ರೆಡ್ ಹಾಗೂ ಬನ್‌ಗಳು ಅವಶ್ಯಕ ಆಹಾರ ಪದಾರ್ಥಗಳಲ್ಲಿ ಒಂದು. ಅವುಗಳ ತಯಾರಿಯಲ್ಲಿ ನೀವು ತೊಡಗಿಕೊಳ್ಳಿ. ಈ ಬಗ್ಗೆ ಪೊಲೀಸ್ ಇಲಾಖೆಗೂ ಮಾಹಿತಿ ನೀಡುತ್ತೇವೆ ಎಂದರು.
ಕಾಫಿ, ಟೀ ಬಿಟ್ಟು ಉಳಿದೆಲ್ಲಾ ಬೇಕರಿ ಪದಾರ್ಥಗಳನ್ನು ಮಾರಾಟ ಮಾಡಬಹುದು. ಗೊಂದಲ ಇಲ್ಲದೇ ನೀವು ನಿಮ್ಮ ಮಳಿಗೆಗಳನ್ನು ತೆರೆಯಿರಿ ಎಂದರು.
ಪೌರಕಾರ್ಮಿಕರಿಗೆ ಹೊಸ ಡ್ರೆಸ್: ಕ್ವಾರಂಟೈನ್ ಮನೆಗಳಲ್ಲಿ ಕಸ ಪಡೆಯುವ ಹಾಗೂ ಔಷಧ ಸಿಂಪಡಿಸಲು ಪೌರಕಾರ್ಮಿಕರಿಗೆ ನೂತನ ಡ್ರೆಸ್ ನೀಡಲಾಗಿದೆ. ಎಲ್ಲಾ ಘಟಕಗಳಲ್ಲಿ ಇಬ್ಬರಿಗೆ ಈ ಡ್ರೆಸ್ ಬಳಕೆ ಮಾಡಲು ಅವಕಾಶವಿದೆ ಎಂದರು.