ಮೈಸೂರು: ಸುಮಾರು 410 ವರ್ಷಗಳಿಂದಲೂ ದಸರಾ ಹಬ್ಬವನ್ನು ವೈಭವದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ದಸರಾ ಬೆಳೆದು ಬಂದ ಹಾದಿಯ ಬಗ್ಗೆ ಯದುವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈಟಿವಿ ಭಾರತಗೆ ನೀಡಿದ ವಿಶೇಷ ಸಂದರ್ಶನದಲ್ಲಿ ವಿವರಿಸಿದರು.
ಮೈಸೂರು ದಸರಾ ಮಹೋತ್ಸವ ಹಾಗೂ ರಾಜಮನೆತನದ ಶರನ್ನವರಾತ್ರಿ ಎರಡು ಒಂದೇ ಆಗಿದೆ. ಪ್ರಸ್ತುತ 410 ನೇ ವರ್ಷದ ದಸರಾ ಆಚರಣೆ ನಡೆಯುತ್ತಿದೆ. ಕೆಲವರು ಮೈಸೂರು ವಿಶ್ವವಿಖ್ಯಾತ ದಸರಾ ಹಬ್ಬ ವಿಜಯನಗರ ಕಾಲದಲ್ಲಿ ಶುರುವಾದ ಆಚರಣೆ ಎಂದು ಹೇಳುತ್ತಾರೆ. ಆದರೆ, ರಾಮಾಯಣ ಮತ್ತು ಮಹಾಭಾರತಗಳಲ್ಲಿ ಕೈಗೊಳ್ಳಲಾಗುತ್ತಿದ್ದ ಯಜ್ಞ, ಯಾಗಾದಿಗಳನ್ನು ಮುಂದುವರೆಸಿಕೊಂಡು ಹೋಗುವುದು ನಂತರದ ಪೀಳಿಗೆಗೆ ವೆಚ್ಚದಾಯಕವಾಗಿದ್ದರಿಂದ, ವಿಜಯನಗರ ಕಾಲದಲ್ಲಿ ನವರಾತ್ರಿ ಆಚರಣೆ ಪ್ರಾರಂಭಿಸಲಾಯಿತು ಎಂದರು.
ವಿಜಯನಗರದ ಚಕ್ರವರ್ತಿಗಳು ದುರ್ಬಲರಾಗುತ್ತಾ ಹೋದಾಗ ನಂತರದ ಅವಧಿಯಲ್ಲಿ ಧರ್ಮದ ರಕ್ಷಣೆಗಾಗಿ ಬಂದ ಮನೆತನವೇ ಮೈಸೂರು ರಾಜರ ಸಂಸ್ಥಾನ. ಪ್ರಜಾಪ್ರಭುತ್ವ ಆಳ್ವಿಕೆಯಲ್ಲಿ ಸರ್ಕಾರ ನಾಡಹಬ್ಬ ದಸರಾ ಮಹೋತ್ಸವನ್ನು ಅರಮನೆಯ ಹೊರ ಭಾಗದಲ್ಲಿ ಆಚರಿಸುತ್ತಿದ್ದು, ರಾಜಮನೆತನದವರು ಶರನ್ನವರಾತ್ರಿ ಹೆಸರಿನಲ್ಲಿ ಅರಮನೆ ಒಳಗೆ ಒಂಬತ್ತು ದಿನಗಳ ಕಾಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಸಿಕೊಂಡು ಬರಲಾಗುತ್ತಿದೆ ಎಂದು ಯದುವೀರ್ ವಿವರಿಸಿದರು.