ಮೈಸೂರು : ಮೈಸೂರು ಸುತ್ತಮುತ್ತ ನಡೆದಿರುವ ಭೂ ಕಬಳಿಕೆ ಬಗ್ಗೆ ತನಿಖೆ ಮಾಡಲು ಉನ್ನತ ಮಟ್ಟದ ಸಮಿತಿ ರಚನೆ ಮಾಡಲಿ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಸರ್ಕಾರವನ್ನು ಆಗ್ರಹಿಸಿದ್ದಾರೆ. ಇಂದು ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ ವೇಳೆ ಮಾತನಾಡಿದ ಅವರು, ಮೈಸೂರು ನಗರದ ಸುತ್ತಮುತ್ತ 3 ಪಕ್ಷದ ಕೆಲವು ರಾಜಕಾರಣಿಗಳು ಭೂ ಅಕ್ರಮದಲ್ಲಿ ಭಾಗಿಯಾಗಿದ್ದಾರೆ.
ಇದರ ಬಗ್ಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ ಸಮಿತಿ ರಚನೆ ಮಾಡಿ ತನಿಖೆ ನಡೆಸಬೇಕಿದೆ. ಇದಕ್ಕಾಗಿ 10 ದಿನಗಳ ಕಾಲ ರಾಜ್ಯ ಸರ್ಕಾರಕ್ಕೆ ಕಾಲಾವಕಾಶ ಕೊಡುತ್ತೇವೆ. ಸಮಿತಿ ರಚನೆ ಮಾಡದಿದ್ದರೆ ರಾಜಭವನದ ಮುಂದೆ ಪ್ರತಿಭಟನೆ ನಡೆಸುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಇನ್ನು, ಕೋವಿಡ್ನಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. 3 ವರ್ಷಗಳ ಕಾಲ ಸಾಲ ಹಾಗೂ ಬಡ್ಡಿ ವಸೂಲಿ ಮಾಡಬಾರದು. ಕೂಡಲೇ ಹೊಸ ಸಾಲ ರೈತರಿಗೆ ನೀಡಬೇಕು ಹಾಗೂ ಕಬ್ಬು ಬೆಳೆಗಾರರ ಬಾಕಿ ಹಣ ಶೀಘ್ರವೇ ನೀಡಬೇಕೆಂದು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಿದರು.