ಮೈಸೂರು : ಕೇರಳದಿಂದ ತ್ಯಾಜ್ಯವನ್ನು ತುಂಬಿಕೊಂಡು ಮೈಸೂರಿಗೆ ಬಂದ ಲಾರಿಯನ್ನು ಮಹಾನಗರ ಪಾಲಿಕೆಯ ಅಧಿಕಾರಿಗಳು ತಡ ರಾತ್ರಿ ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೊಪ್ಪಿಸಿರುವ ಘಟನೆ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೇರಳದಿಂದ ಮಲಿನ ತ್ಯಾಜ್ಯವನ್ನು ಮೈಸೂರಿನ ಗಡಿ ಭಾಗದಲ್ಲಿ ತಂದು ಬಿಸಾಡುತ್ತಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಎಲ್ಲಾ ಕಡೆ ಈ ವಿಚಾರದ ಬಗ್ಗೆ ಕಾವಲು ಹಾಕಿದ್ದರು. ಕಳೆದ ರಾತ್ರಿ ಕೇರಳದಿಂದ ತ್ಯಾಜ್ಯ ತುಂಬಿಕೊಂಡು ಬಂದ ಲಾರಿ ಮೈಸೂರಿನ ಟೋಲ್ ಗೇಟ್ ಬಳಿ ತೆರಿಗೆ ಅಧಿಕಾರಿಗಳು ತಪಾಸಣೆ ನಡೆಸಿದಾಗ ಸಿಕ್ಕಿಬಿದ್ದಿದೆ.
ಈ ತ್ಯಾಜ್ಯವನ್ನು ನಗರದ ಶಾಂತಿನಗರದ ಟ್ರೇಡರ್ಸ್ ಒಬ್ಬರ ಹೆಸರಿನಲ್ಲಿ ನಕಲಿ ಬಿಲ್ ಮಾಡಲಾಗಿದ್ದು, ತೆರಿಗೆ ಅಧಿಕಾರಿಗಳ ಮಾಹಿತಿಯಿಂದ ತಮ್ಮ ವಶಕ್ಕೆ ಪಡೆದ ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಲಾರಿ ಚಾಲಕ ಜಾಫರ್‌ನ ಉದಯಗಿರಿ ಪೊಲೀಸರಿಗೆ ಒಪ್ಪಿಸಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸ್ಥಳಕ್ಕೆ ಮೇಯರ್ ಪುಷ್ಪಲತಾ ಜಗನ್ನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿ ಪಾಲಿಕೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.