ಮೈಸೂರು: ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯವು, 'ತೆರೆದ ಪುಸ್ತಕ ಪರೀಕ್ಷೆ'ನಡೆಸಿ ವಿದ್ಯಾರ್ಥಿಗಳಿಗೆ ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತ ಕ್ರಮ ಕೈಗೊಳ್ಳಲು ಮುಂದಾಗಿದೆ.
ವಿದ್ಯಾರ್ಥಿಗಳಿಗೆ ಮನೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಕೋವಿಡ್ ಭೀತಿಯಿಂದ ಈ ಬಾರಿಯ ಪರೀಕ್ಷೆ ನಡೆಸುವುದು ಕಷ್ಟ ಸಾಧ್ಯ. ಹಾಗಾಗಿ ಅಸೈನ್ಮೆಂಟ್ ಆಧಾರದಲ್ಲಿ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ಬಡ್ತಿಗೊಳಿಸುವ ಬದಲು 'ತೆರೆದ ಪುಸ್ತಕ ಪರೀಕ್ಷೆ' ನಡೆಸಲು ಮುಕ್ತ ವಿವಿ ನಿರ್ಧರಿಸಿದೆ.
ಈಗಾಗಲೇ ಅಮೆರಿಕ, ಕೆನಡಾ, ಜರ್ಮನಿ, ಆಸ್ಟ್ರೇಲಿಯಾದಲ್ಲಿ 'ತೆರೆದ ಪುಸ್ತಕ ಪರೀಕ್ಷೆ' ಯಶಸ್ವಿಯಾಗಿ ಅನುಷ್ಠಾನಗೊಂಡಿದ್ದು, ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ತೆರೆದ ಪುಸ್ತಕ ಪರೀಕ್ಷೆ ನಡೆಸಲು ಮುಕ್ತ ವಿವಿ ಆದೇಶ ಹೊರಡಿಸಿದೆ. 2019-20 ರ ಶೈಕ್ಷಣಿಕ ಸಾಲಿನಲ್ಲಿ ಒಟ್ಟು 12 ಸಾವಿರ ವಿದ್ಯಾರ್ಥಿಗಳು ಈ ವಿನೂತನ ಪರೀಕ್ಷಾ ಪದ್ಧತಿ ಎದುರಿಸಲಿದ್ದಾರೆ.
ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆಗಳಲ್ಲಿ ನೀಡಿರುವ ನಿಯಮಗಳ ಸೂಚನೆ ಅನುಸಾರ ಎ4 ಅಳತೆಯ ಹಾಳೆಯಲ್ಲಿ ಉತ್ತರಗಳನ್ನು ಹುಡುಕಿ ಕೈಬರಹದಲ್ಲಿ ಬರೆದ ಎಲ್ಲ ಉತ್ತರ ಪತ್ರಿಕೆಗಳನ್ನು ವಿವಿಯ ಪರೀಕ್ಷಾಂಗ ವಿಭಾಗಕ್ಕೆ ಪೋಸ್ಟ್ ಮಾಡಬೇಕು. ನಂತರ ಪರೀಕ್ಷಾಂಗ ವಿಭಾಗ ಉತ್ತರಪತ್ರಿಕೆಗಳನ್ನು ಪರಿಶೀಲಿಸಿ ಅಂಕಗಳನ್ನು ನೀಡಲಿದೆ.
ಕೇಂದ್ರ ಸರ್ಕಾರದ ಮಾರ್ಗಸೂಚಿ ಹಾಗೂ ಯುಜಿಸಿಯ ಆದೇಶದನ್ವಯ ಕೋವಿಡ್-19 ರ ಹಿನ್ನೆಲೆಯಲ್ಲಿ ಮುಕ್ತ ವಿಶ್ವ ವಿದ್ಯಾಲಯದ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಕೊರೊನಾ ಹರಡುವುದನ್ನು ತಡೆಗಟ್ಟಲು ಈ ಬಾರಿ ತೆರೆದ ಪುಸ್ತಕದ ಪರೀಕ್ಷೆ ನಡೆಸಲಾಗುತ್ತಿದೆ.
ಈ ಕುರಿತು ಕರಾಮುವಿವಿ ಪತ್ರಿಕೋದ್ಯಮ ಡೀನ್ ಡಾ.ತೇಜಸ್ವಿ ನವಿಲೂರು ಮಾತನಾಡಿ, ಇದರಿಂದ ವಿದ್ಯಾರ್ಥಿಗಳು ತಾವಿರುವ ಸ್ಥಳದಲ್ಲಿ ವಿಶ್ವವಿದ್ಯಾನಿಲಯ ನೀಡುವ ಪ್ರಶ್ನೆಗಳಿಗೆ ಉತ್ತರ ನೀಡಿ ಪರೀಕ್ಷೆ ಬರೆಯಬಹುದಾಗಿದೆ. ಮುಕ್ತ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಸೇರಿದಂತೆ ಹಿರಿಯ ನಾಗರಿಕರು ಸಹ ಪರೀಕ್ಷೆ ಬರೆಯುವುದರಿಂದ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.
ಮುಕ್ತ ವಿವಿಯ ಪರೀಕ್ಷಾಂಗ ಕುಲಸಚಿವೆ ಡಾ. ಕವಿತಾ ರೈ ಮಾತನಾಡಿ, ಮುಕ್ತ ವಿಶ್ವವಿದ್ಯಾನಿಲಯದ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದ ವಿದ್ಯಾರ್ಥಿಗಳಿಗೆ ಅವರು ಸ್ಥಳದಲ್ಲೇ ತೆರೆದ ಪುಸ್ತಕದ ಮುಖಾಂತರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಮುಕ್ತ ವಿಶ್ವವಿದ್ಯಾನಿಲಯ ನಿಯಮಗಳನುಸಾರ ವೆಬ್ಸೈಟ್ನಲ್ಲಿ ವಿದ್ಯಾರ್ಥಿಗಳು ತೆಗೆದುಕೊಂಡಿರುವ ಪಠ್ಯಗಳ ಅನುಸಾರ ಪ್ರಶ್ನೆಗಳನ್ನು ನಮೂದಿಸಲಾಗುತ್ತದೆ. ವಿದ್ಯಾರ್ಥಿಗಳು ಎ4 ಅಳತೆಯ ಬಿಳಿ ಹಾಳೆಯಲ್ಲಿ ಉತ್ತರಿಸಿ ಪರೀಕ್ಷಾಂಗ ವಿಭಾಗಕ್ಕೆ ಕಳುಹಿಸಿದರೆ ಅದನ್ನು ಪರಿಶೀಲಿಸಿ ಅಂಕಗಳನ್ನು ನೀಡಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.