ಮೈಸೂರು: ನಟಿ ರಾಖಿ ಸಾವಂತ್ ಪತಿ ಆದಿಲ್ ಖಾನ್ ದುರಾನಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಇರಾನ್ ದೇಶದಿಂದ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ಬಂದ ವಿದ್ಯಾರ್ಥಿನಿಯೊಬ್ಬರು ಈತನ ವಿರುದ್ಧ ಅತ್ಯಾಚಾರ, ವಂಚನೆ, ಬೆದರಿಕೆ ಆರೋಪ ಹೊರಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನನ್ವಯ ಮೈಸೂರಿನ ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ದೂರಿನ ವಿವರ: ಮೈಸೂರಿನಲ್ಲಿ ಡಾಕ್ಟರ್ ಆಫ್ ಫಾರ್ಮಸಿ ಮಾಡಲು ಬಂದಿದ್ದು ಕಳೆದ 5 ವರ್ಷಗಳಿಂದ ಆದಿಲ್ ಖಾನ್ ದುರಾನಿ ಪರಿಚಯ. ಮದುವೆ ಆಗುವುದಾಗಿ ನಂಬಿಸಿ ವಿ.ವಿ ಪುರಂನಲ್ಲಿರುವ ಅಪಾರ್ಟ್ಮೆಂಟ್ವೊಂದರಲ್ಲಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಇತ್ತೀಚೆಗೆ 5 ತಿಂಗಳಿನಿಂದ ಮದುವೆ ವಿಚಾರದಲ್ಲಿ ಮಾತು ತಪ್ಪಿದ್ದಾನೆ. ಮದುವೆ ಮಾಡಿಕೊಳ್ಳುವಂತೆ ಒತ್ತಾಯಿಸಿದರೆ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಕಳುಹಿಸಿ ಸೋಷಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ಬೆದರಿಕೆ ಹಾಕುತ್ತಿದ್ದಾನೆ ಎಂದು ವಿದ್ಯಾರ್ಥಿನಿ ದೂರು ಸಲ್ಲಿಸಿದ್ದಾರೆ.
ಪತಿ ವಿರುದ್ಧ ದೂರು ನೀಡಿದ್ದ ರಾಖಿ: ಈ ಹಿಂದೆ, ಪತಿ ಆದಿಲ್ ಖಾನ್ ದುರಾನಿ ವಿರುದ್ಧ ಮಹಾರಾಷ್ಟ್ರದ ಓಶಿವಾರ ಪೊಲೀಸ್ ಠಾಣೆಯಲ್ಲಿ ರಾಖಿ ಸಾವಂತ್ ದೂರು ದಾಖಲಿಸಿದ್ದರು. ಈ ಸಂಬಂಧ ಆದಿಲ್‌ನನ್ನು ಪೊಲೀಸರು ಬಂಧಿಸಿದ್ದಾರೆ. ತಾಯಿಯ ಚಿಕಿತ್ಸೆಗೂ ಪತಿ ದುಡ್ಡು ನೀಡಿಲ್ಲವೆಂದು ರಾಖಿ ಆರೋಪಿಸಿದ್ದರು.
ಇದನ್ನೂ ಓದಿ: ಮೈಸೂರಿನ ಆದಿಲ್ ಜೊತೆ ರಾಖಿ ಸಾವಂತ್ ಶಾದಿ: ಇಸ್ಲಾಂಗೆ ಮತಾಂತರವಾಗಿ 'ಪಾತಿಮಾ' ಹೆಸರು
"ಆದಿಲ್ ನನ್ನ ತಾಯಿಯ ಚಿಕಿತ್ಸೆಗೆ ಹಣ ನೀಡಿಲ್ಲ. ಬಿಗ್ ಬಾಸ್ ಶೋಗೆ ಹೋಗುವುದಕ್ಕೂ ಮುನ್ನ 10 ಲಕ್ಷ ರೂಪಾಯಿ ನೀಡಿದ್ದೆ. ಆದರೆ ಅವರು ನನ್ನ ತಾಯಿಗೆ ಚಿಕಿತ್ಸೆ ಕೊಡಿಸಿಲ್ಲ" ಎಂದು ದೂರಿದ್ದರು. ಅಲ್ಲದೇ ಆದಿಲ್ ಅವರಿಂದಾಗಿಯೇ ನನ್ನ ತಾಯಿ ಸಾವನ್ನಪ್ಪಿರುವುದಾಗಿ ಅವರು ಹೇಳಿದ್ದಾರೆ. ಹಲ್ಲೆ ಆರೋಪ ಮತ್ತು ವಿವಾಹೇತರ ಸಂಬಂಧವನ್ನೂ ಆತ ಇಟ್ಟುಕೊಂಡಿರುವುದಾಗಿ ಬಹಿರಂಗಪಡಿಸಿದ್ದರು.
ಆದಿಲ್ ವಿರುದ್ಧ ಅನೇಕ ಕ್ರಿಮಿನಲ್ ಕೇಸ್ಗಳಿವೆ. ಮುಂಚೆಯೇ ನನಗೆ ಗೊತ್ತಾಗಿದ್ದರೆ ನಾನು ಮದುವೆ ಆಗುತ್ತಿರಲಿಲ್ಲ ಎಂದು ಇತ್ತೀಚೆಗಷ್ಟೇ ಮಾಧ್ಯಮದೊಂದಿಗೆ ಹೇಳಿಕೊಂಡಿದ್ದರು. ಇದಕ್ಕೂ ಮೊದಲು ಆದಿಲ್ ಖಾನ್, ರಾಖಿ ಮೇಲೆ ಹಲ್ಲೆ ನಡೆಸಿದ ಫೋಟೋ ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದವು. ಇದನ್ನು ರಾಖಿಯ ಸಹೋದರ ಹಂಚಿಕೊಂಡಿದ್ದರು.
ಗೌಪ್ಯವಾಗಿ ವಿವಾಹ: ಹೊಸ ವರ್ಷದ ಆರಂಭದಲ್ಲೇ ರಾಖಿ ಸಾವಂತ್ ಮತ್ತು ಆದಿಲ್ ಖಾನ್ ದುರಾನಿ ವಿವಾಹದ ಪೋಟೋಗಳು, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಈ ಬಗ್ಗೆ ಸ್ವತಃ ರಾಖಿ ಸಾವಂತ್ ಸ್ಪಷ್ಟನೆ ನೀಡಿದ್ದರು. ಏಳು ತಿಂಗಳ ಹಿಂದೆ ನಾವಿಬ್ಬರು ಮದುವೆ ಆಗಿರುವುದಾಗಿ ತಿಳಿಸಿದ್ದರು.
ಇದನ್ನೂ ಓದಿ: ಪತಿ ವಿರುದ್ಧ ದೂರು: ಪಾಪರಾಜಿಗಳಿಗೆ ಮಾಹಿತಿ ನೀಡುತ್ತಿದ್ದ ವೇಳೆ ಪ್ರಜ್ಞೆ ತಪ್ಪಿ ಬಿದ್ದ ರಾಖಿ ಸಾವಂತ್!