ಅಮಾನತು ಮಾಡಿದರೂ ಸಿದ್ಧವಾಗಿದ್ದೇನೆ: ಶಾಸಕ ತನ್ವೀರ್ ಸೇಠ್ - MLA Tanveer Sait
ಮೇಯರ್ ಸ್ಥಾನ ಜೆಡಿಎಸ್‌ಗೆ ಬಿಟ್ಟು ಕೊಟ್ಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಾಸಕ ತನ್ವೀರ್ ಸೇಠ್, ಒಬ್ಬರ ಗೌರವ ಕಾಪಾಡಲು ಎಲ್ಲರ ಗೌರವ ಹರಾಜು ಹಾಕಲು ಆಗುವುದಿಲ್ಲ. ಪದೇ ಪದೆ ನನ್ನ ತೇಜೋವಧೆ ಮಾಡಿ ನನ್ನ ಲೋಪ ಅಂತಾ ಹೇಳುವುದು ಸರಿ ಅಲ್ಲ ಎಂದು ಕಿಡಿಕಾರಿದರು.
ಮೈಸೂರು: ನಾನು ಯಾವುದಕ್ಕೂ ಹೆದರುವುದಿಲ್ಲ, ಅಮಾನತು ಮಾಡಿದರೂ ಸಿದ್ಧವಾಗಿದ್ದೇನೆ ಎಂದು ಶಾಸಕ ತನ್ವೀರ್ ಸೇಠ್ ಗುಡುಗಿದರು.
ಮೇಯರ್ ಸ್ಥಾನ ಜೆಡಿಎಸ್‌ಗೆ ಬಿಟ್ಟು ಕೊಟ್ಟ ವಿಚಾರ ಹಾಗೂ ಶಾಸಕ ತನ್ವೀರ್ ಸೇಠ್ ಅಮಾನತು ಮಾಡಲು ಒತ್ತಾಯ ಹಿನ್ನೆಲೆಯಲ್ಲಿ ತಮ್ಮ ನಿವಾಸದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ತನ್ವೀರ್ ಸೇಠ್, ನಾನು ಸಹ 5 ಬಾರಿ ಗೆದ್ದಿದ್ದೇನೆ. ಒಬ್ಬರ ಗೌರವ ಕಾಪಾಡಲು ಎಲ್ಲರ ಗೌರವ ಹರಾಜು ಹಾಕಲು ಆಗುವುದಿಲ್ಲ. ಪದೇ ಪದೆ ನನ್ನ ತೇಜೋವಧೆ ಮಾಡಿ ನನ್ನ ಲೋಪ ಅಂತಾ ಹೇಳುವುದು ಸರಿ ಅಲ್ಲ ಎಂದು ಕಿಡಿಕಾರಿದರು.
ನನ್ನ ವಿರುದ್ಧ ಆದ ಪದ ಬಳಕೆ ಸರಿಯಲ್ಲ. ನಮ್ಮದು ವ್ಯಕ್ತಿ ಪೂಜೆ ಮಾಡುವ ಪರಂಪರೆಯಲ್ಲ. ಇತ್ತೀಚೆಗೆ ವ್ಯಕ್ತಿ ಪೂಜೆ ಮಾಡಲಾಗುತ್ತಿದೆ. ಶುಕ್ರವಾರದ ಮಾಜಿ ಮೇಯರ್, ಪಾಲಿಕೆ ಸದಸ್ಯರ ಪ್ರೆಸ್ ಮೀಟ್ಗೆ ಸಮಜಾಯಿಷಿ ಕೊಡಲ್ಲ. ನನ್ನ ವಿರುದ್ಧ ಕ್ರಮ ಕೈಗೊಂಡರೆ ಅದರ ಪರಿಣಾಮ ಎದುರಿಸಲು ಸಿದ್ಧನಾಗಿದ್ದೇನೆ. ನಾನು ಮಾರಾಟದ ವಸ್ತುವಲ್ಲ. ರಾಜಕೀಯ ತತ್ವ, ಸಿದ್ಧಾಂತ ಉಳಿಸಿಕೊಂಡಿದ್ದೇನೆ, ಅದಕ್ಕಾಗಿ ಹಲವು ತ್ಯಾಗ ಮಾಡಿದ್ದೇನೆ ಎಂದರು.
ಕಾಂಗ್ರೆಸ್ ಜೆಡಿಎಸ್ ಮೈತ್ರಿ ಆಗಬಾರದು ಅನ್ನೋ ಬಗ್ಗೆ ಡೀಲ್ ಆಗಿದ್ದು ತನಿಖೆಯಾಗಬೇಕು. ಹಲವು ದಿನಗಳಿಂದ ನನ್ನ ವಿರುದ್ದ ಷಡ್ಯಂತ್ರ ನಡೆಯುತ್ತಿದೆ. ಸೋಮವಾರ ಡಿ.ಕೆ. ಶಿವಕುಮಾರ್ ಭೇಟಿ ಮಾಡಿ ವರದಿ ನೀಡುವೆ. ಪಕ್ಷಕ್ಕಿಂತ ದೊಡ್ಡದು ಯಾವುದೂ ಇಲ್ಲ. ಏನೇ ಇದ್ರೂ ಪಕ್ಷಕ್ಕೆ ಮಾತ್ರ ನಾನು ಉತ್ತರದಾಯಿ. ನನ್ನನ್ನು ರಾಜಕೀಯವಾಗಿ ಮುಗಿಸಲು ಸಾಧ್ಯವಿಲ್ಲ. ನನ್ನನ್ನು ಮುಗಿಸಲು ನನ್ನ ಜನರು ಬಿಡಲ್ಲ. ನನಗೆ ಪಕ್ಷದ ಋಣವಿದೆ. ವ್ಯಕ್ತಿಗಳ ವರ್ಚಸ್ಸು ವಿಚಾರ ಬಂದಾಗ ಎಲ್ಲರಿಗೂ ಗೌರವ ಮತ್ತು ವರ್ಚಸ್ಸು ಇದೆ ಎಂದರು.
ಸಿದ್ದರಾಮಯ್ಯ ಕಾಲ್ ಮಾಡಿದ್ರೂ ತನ್ವೀರ್ ರಿಸೀವ್ ಮಾಡಲಿಲ್ಲ ಎಂಬ ಪಾಲಿಕೆ ಸದಸ್ಯರ ಆರೋಪದ ವಿಚಾರ ಮಾತನಾಡಿ, ಸಿದ್ದರಾಮಯ್ಯ 16 ಸಾರಿ ಕಾಲ್ ಮಾಡಿದ್ದಾರೆ. ಆ ಸಮಯದಲ್ಲಿ ನಾನು ಪಾಲಿಕೆ ಸದನದ ಒಳಗಿದ್ದೆ. ಅಲ್ಲಿ ಮೊಬೈಲ್ ತೆಗೆದುಕೊಂಡು ಹೋಗುವ ಹಾಗಿಲ್ಲ. ಹಾಗಾಗಿ ಅವರ ಕರೆ ಸ್ವೀಕರಿಸಲು ಸಾಧ್ಯವಾಗಿಲ್ಲ. ಈ ಬಗ್ಗೆ ಈಗಾಗಲೇ ಕೆಪಿಸಿಸಿ ಅಧ್ಯಕ್ಷರಿಗೆ ತಿಳಿಸಿದ್ದೇನೆ ಎಂದು ಶಾಸಕ ತನ್ವೀರ್ ಸೇಠ್ ಸ್ಪಷ್ಟನೆ ನೀಡಿದರು.
ಓದಿ: ಮಾಜಿ ಸಿಎಂ ಸಿದ್ದರಾಮಯ್ಯ ಹೆಸರು ಹೇಳದೇ ಟಾಂಗ್ ಕೊಟ್ಟ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್